ಬಳ್ಳಾರಿ: ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕೊಳಗಲ್ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪವಾಡಪುರುಷ ಎರ್ರಿತಾತ ಸ್ವಾಮಿಯ ಮೂರ್ತಿ ಕೂರಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಆರಂಭವಾದ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಗಲಾಟೆ ನಡೆದಿದೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
ಗ್ರಾಮದಲ್ಲಿ ಡಿಎ ಆರ್ ತುಕಡಿ ಜೊತೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಪವಾಡಪುರುಷ ಎರ್ರಿತಾತ ಸ್ವಾಮಿಯ ದೇವಸ್ಥಾನ ಕಟ್ಟುವ ವಿಚಾರವಾಗಿ ವಿವಾದ ನಡೆದು ಎರಡು ಗುಂಪುಗಳು ಕೋರ್ಟ್ ಮೆಟ್ಟಿಲೇರಿದ್ದವು. ಕೋರ್ಟ್ ನಲ್ಲಿ ದೇವಸ್ಥಾನ ಗೋಪುರ ಹಾಗೂ ಕಾಂಪೌಂಡ್ ಕಟ್ಟಲು ಅನುಮತಿ ಸಿಕ್ಕಿತ್ತು. ಗೋಪರ ನಿರ್ಮಾಣದ ಬಳಿಕ ಇಂದು ಮುಂಜಾನೆ ದೇವಸ್ಥಾನದ ಒಳಗೆ ಒಂದು ಗುಂಪು ಮೂರ್ತಿ ಕೂರಿಸಿದ್ದಾರೆ. ಇದೇ ವಿಚಾರವಾಗಿ ಇನ್ನೊಂದು ಗುಂಪಿನವರು ವಿರೋಧ ವ್ಯಕ್ತಪಡಿಸಿದ್ದಾರೆ. ಮೂರ್ತಿ ತೆರವಿಗೆ ಪಟ್ಟು ಹಿಡಿದಿದ್ದಾರೆ. ಇದರಿಂದ ಎರಡು ಗುಂಪಳ ನಡುವೆ ಗಾಲಾಟೆಯಾಗಿದೆ ಎಂದು ತಿಳಿದುಬಂದಿದೆ.