ಉದ್ಯೋಗಿಗಳ ಪಾಲಿಗೆ ಕಳೆದ ವರ್ಷ ತುಸು ಕಹಿಯಾಗಿತ್ತು. ಜಾಗತಿಕ ಆರ್ಥಿಕ ಹಿಂಜರಿತದ ಕಾರಣಕ್ಕೆ ಗೂಗಲ್, ಅಮೆಜಾನ್, ಮೆಟಾ, ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ಈ ವರ್ಷವಾದರೂ ಉದ್ಯೋಗಿಗಳ ಪಾಲಿಗೆ ಭರವಸೆ ತರಬಹುದು ಎಂಬ ನಿರೀಕ್ಷೆಯ ಮಧ್ಯೆ ವರ್ಷಾರಂಭದಲ್ಲೇ ಸ್ಟಾರ್ಟ್ ಅಪ್ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ.
ಆನ್ಲೈನ್ ರೆಂಟಲ್ ಫ್ಲಾಟ್ ಫಾರಂ ‘ಫ್ರಂಟ್ ಡೆಸ್ಕ್’ ವರ್ಷದ ಆರಂಭದಲ್ಲೇ ಕೇವಲ ಎರಡು ನಿಮಿಷಗಳ ಗೂಗಲ್ ಮೀಟ್ ಕರೆಯಲ್ಲಿ 200 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದೆ. ವಜಾಗೊಂಡವರ ಪೈಕಿ ಪೂರ್ಣ ಪ್ರಮಾಣದ ಉದ್ಯೋಗಿಗಳು, ಅರೆಕಾಲಿಕ ಕೆಲಸಗಾರರು ಹಾಗೂ ಗುತ್ತಿಗೆದಾರರು ಇದ್ದಾರೆ ಎಂದು ಹೇಳಲಾಗಿದೆ.
2017ರಲ್ಲಿ ಸ್ಥಾಪನೆಯಾದ ಈ ಸ್ಟಾರ್ಟ್ ಅಪ್ ಕಂಪನಿ ಅಮೇರಿಕಾದ ವಿವಿಧ ಸ್ಥಳಗಳಲ್ಲಿ ಅಪಾರ್ಟ್ಮೆಂಟ್ ಗಳನ್ನು ನಿರ್ವಹಿಸುತ್ತಿತ್ತು. ಅಲ್ಲದೆ ಹೆಸರಾಂತ ಹೂಡಿಕೆದಾರರಿಂದ 26 ಮಿಲಿಯನ್ ಡಾಲರ್ ಬಂಡವಾಳವನ್ನು ಸಂಗ್ರಹಿಸಿತ್ತು ಎನ್ನಲಾಗಿದ್ದು, ಇದೀಗ ಮುಚ್ಚುವ ಹಂತದಲ್ಲಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿ ಆರಂಭಿಕ ಪ್ರಕ್ರಿಯೆಯಾಗಿ ವರ್ಷದ ಆರಂಭದಲ್ಲೇ ತನ್ನ ಇನ್ನೂರು ಉದ್ಯೋಗಿಗಳನ್ನು ವಜಾಗೊಳಿಸಿದೆ.