ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ 9 ಸಚಿವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗಿದ್ದು, ಸಚಿವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ. ಇತ್ತೀಚೆಗಷ್ಟೇ ನಡೆದ ಪಂಚ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಸಂಸದರನ್ನು ಕಣಕ್ಕಿಳಿಸಿ ಯಶಸ್ವಿಯಾಗಿತ್ತು. ಅದೇ ತಂತ್ರವನ್ನು ರಾಜ್ಯದಲ್ಲಿ ಅನುಸರಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ಚಾಮರಾಜನಗರದಿಂದ ಡಾ. ಹೆಚ್.ಸಿ. ಮಹದೇವಪ್ಪ, ತುಮಕೂರಿನಿಂದ ಕೆ.ಎನ್. ರಾಜಣ್ಣ, ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ, ಮಂಡ್ಯದಿಂದ ಚೆಲುವರಾಯಸ್ವಾಮಿ, ಹಾವೇರಿಯಿಂದ ಹೆಚ್.ಕೆ. ಪಾಟೀಲ್, ಬೆಂಗಳೂರು ಉತ್ತರದಿಂದ ಕೃಷ್ಣ ಬೈರೇಗೌಡ. ಬೆಂಗಳೂರು ಸೆಂಟ್ರಲ್ ನಿಂದ ಜಮೀರ್ ಅಹ್ಮದ್, ಜಾರ್ಜ್, ಹ್ಯಾರಿಸ್, ಉತ್ತರ ಕನ್ನಡದಿಂದ ಆರ್.ವಿ. ದೇಶಪಾಂಡೆ, ಕೋಲಾರದಿಂದ ಪರಮೇಶ್ವರ್, ಮುನಿಯಪ್ಪ, ಬೀದರ್ ನಿಂದ ಈಶ್ವರ ಖಂಡ್ರೆ ಅವರನ್ನು ಕಣಕ್ಕಿಳಿಸುವ ಚಿಂತನೆ ಇದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿ ಜಯಗಳಿಸಿತ್ತು. ಈ ಬಾರಿ 15ರಿಂದ 20 ಸ್ಥಾನಗಳನ್ನು ಗೆಲ್ಲುವ ಉದ್ದೇಶದೊಂದಿಗೆ ಕಾರ್ಯತಂತ್ರ ರೂಪಿಸಲಾಗುತ್ತಿದ್ದು, 9 ಸಚಿವರನ್ನು ಕಣಕ್ಕಿಳಿಸಲು ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.