ಮಂಗಳೂರು: ಮಂಗಳೂರು -ಗೋವಾ ಸೇರಿದಂತೆ ದೇಶದ ಆರು ಕಡೆಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ಡಿ. 30ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.
ಮಂಗಳೂರು -ಮಡಗಾಂವ್ ಸೇರಿದಂತೆ ಆರು ವಂದೇ ಭಾರತ್ ಹಾಗೂ ಎರಡು ಅಮೃತ್ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಇದೇ ಸಂದರ್ಭದಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಿರ್ಮಾಣಗೊಂಡ 4 ಮತ್ತು 5ನೇ ಫ್ಲಾಟ್ ಫಾರಂ ಕೂಡ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ.
ಪ್ರಸ್ತಾಪಿತ ವೇಳಾಪಟ್ಟಿಯ ಪ್ರಕಾರ, ಮಂಗಳೂರು -ಗೋವಾ ನಡುವಿನ ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ಉಳಿದ ಆರು ದಿನಗಳಲ್ಲಿ ಸಂಚರಿಸಲಿದೆ. ಉಡುಪಿ ಮತ್ತು ಕಾರವಾರಗಳಲ್ಲಿ ಮಾತ್ರ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.