ಬೆಂಗಳೂರು: ಪ್ರವಾಸಕ್ಕೆಂದು ಬೆಂಗಳೂರಿಗೆ ಬಂದಿದ್ದ ಗುಜರಾತ್ ನ ಗೆಜೆಟೆಡ್ ಅಧಿಕಾರಿಯೊಬ್ಬರು ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಗುಜರಾತ್ ನ ಸೂರತ್ ನ 59 ವರ್ಷದ ಸರ್ಕಾರಿ ಅಧಿಕಾರಿಯೊಬ್ಬರು ಬೆಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದರು. ್ಹೋಟೆಲ್ ನಲ್ಲಿ ತಂಗಿದ್ದರು. ನ.30ರಂದು ಚರ್ಚ್ ಸ್ಟ್ರೀಟ್ ಗೆ ಬ್ಯಾಗ್ ಖರೀದಿಸಲೆಂದು ಹೋಗಿದ್ದರು. ಈ ವೇಳೆ ಅಧಿಕಾರಿಯನ್ನು ಪರಿಚಯಿಸಿಕೊಂಡ ಆರೋಪಿಯೊಬ್ಬ ವೇಶ್ಯಾವಾಟಿಕೆಗೆ ಆಹ್ವಾನಿಸಿದ್ದಾನೆ. ಕೆಲ ಸಮಯ ಆತನೊಂದಿಗೆ ಮಾತುಕತೆ ನಡೆಸಿದ ಅಧಿಕಾರಿ ಬಳಿಕ ಆರೋಪಿ ಮಾತಿಗೆ ಒಪ್ಪಿಕೊಂಡಿದ್ದಾರೆ. ಆರೋಪಿ ಅಧಿಕಾರಿಯನ್ನು ಆಟೋದಲ್ಲಿ ಇಂದಿರಾನಗರಕ್ಕೆ ಕರೆತಂದಿದ್ದಾನೆ.
ಬಳಿಕ ಅಧಿಕಾರಿಯನ್ನು ರೂಂ ಗೆ ಕರೆದೊಯ್ದಿದ್ದಾನೆ. ಅಲ್ಲಿ ಇನ್ನಿಬ್ಬರು ಇದ್ದರು. ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಎಂಬುದು ಅಧಿಕಾರಿಗೆ ಆಗಲೇ ಗೊತ್ತಾಗಿದ್ದು. ತಕ್ಷಣ ಅಧಿಕಾರಿ ಕೊಠಡಿಯಿಂದ ಹೊರಡಲು ಮುಂದಾಗಿದ್ದಾರೆ. ಆದರೆ ಅವರನ್ನು ಕೊಠಡಿಯಲ್ಲಿಯೇ ಕೂಡಿಹಾಕಿದ ಆರೋಪಿಗಳು ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿ ತನ್ನ ಬಳಿ ಇದ್ದ 20 ಸಾವಿರ ರೂಪಾಯಿ ಕೊಟ್ಟರೂ ಬಿಟ್ಟಿಲ್ಲ. ಪೇಟಿಎಂ ಮೂಲಕ 30 ಸಾವಿರ ರೂಪಾಯಿ ವರ್ಗಾಯಿಸಿಕೊಂಡಿದ್ದಾರೆ.
ಯಾರಿಗಾದರೂ ಈ ಬಗ್ಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಸಿ ಅಧಿಕಾರಿಯನ್ನು ಆರೋಪಿಗಳು ಬಿಟ್ಟು ಕಳುಹಿಸಿದ್ದಾರೆ. ಘಟನೆಯಿಂದ ಕಂಗಾಲಾಗಿರುವ ಅಧಿಕಾರಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದಾರೆ.