ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ 7.9 ಲಕ್ಷ ಮಹಿಳೆಯರಿಗೆ ಹಣ ನೀಡುವುದು ಬಾಕಿ ಇದ್ದು, ತಾಂತ್ರಿಕ ಸಮಸ್ಯೆ ಸರಿಪಡಿಸಿ ಫಲಾನುಭವಿಗಳ ಖಾತೆಗೆ ಬಾಕಿ ತಿಂಗಳ ಮೊತ್ತವನ್ನು ಸೇರಿಸಿ 15 ದಿನದೊಳಗೆ ಪಾವತಿಸಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ತಾಂತ್ರಿಕ ದೋಷಗಳನ್ನು ಶೀಘ್ರವೇ ಬಗೆಹರಿಸುವಂತೆ ಸಿಡಿಪಿಓಗಳಿಗೆ ಸೂಚನೆ ನೀಡಿದ ಸಚಿವರು, ಆಗಸ್ಟ್ 15ರೊಳಗೆ ನೋಂದಣಿ ಮಾಡಿಸಿಕೊಂಡವರಿಗೆ ಇದುವರೆಗೂ ದುಡ್ಡು ಬಾರದೆ ಇದ್ದರೆ ಒಟ್ಟಿಗೆ ಮೂರು ತಿಂಗಳ 6000 ರೂ. ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.
ದೀಪಾವಳಿ ಹಬ್ಬದ ಹೊತ್ತಿಗೆ ಅಥವಾ ಮುಂದಿನ 15 ದಿನದೊಳಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಪಾವತಿಸಲಾಗುವುದು. 1902 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಹಿಳೆಯರು ಮಾಹಿತಿ ಪಡೆದುಕೊಳ್ಳಬಹುದು. ತಾಂತ್ರಿಕ ಕಾರಣದಿಂದ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ. ಈ ಬಗ್ಗೆ ಮಾಹಿತಿ ಪಡೆದಿದ್ದು, ಇನ್ನೂ 15 ದಿನದೊಳಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಪಾವತಿಸುವುದಾಗಿ ಹೇಳಿದ್ದಾರೆ.