ಕೊಪ್ಪ : ಗೌರಿಗದ್ದೆಯ ಅವಧೂತ ವಿನಯ್ ಗುರೂಜಿಗೆ ಹುಲಿ ಚರ್ಮದ ಸಂಕಷ್ಟ ಎದುರಾಗಿದ್ದು, ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ್ ಗುರೂಜಿ ಆಶ್ರಮಕ್ಕೆ ಅರಣ್ಯಾಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಹುಲಿ ಚರ್ಮದ ಮೇಲೆ ವಿನಯ್ ಗುರೂಜಿ ಕುಳಿತ ಫೋಟೋ ವೈರಲ್ ಆಗಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಈ ಹಿನ್ನೆಲೆ ಡಿಎಫ್ ಒ ನಂದೀಶ್ ನೇತೃತ್ವದ ತಂಡ ಗೌರಿಗದ್ದೆಗೆ ಆಗಮಿಸಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಕಲೆ ಹಾಕಿದೆ ಎಂದು ತಿಳಿದು ಬಂದಿದೆ.
ನಂತರ ಮಾತನಾಡಿದ ಡಿಎಫ್ಒ ನಂದೀಶ್ ‘ ನಾವು ಗೌರಿಗದ್ದೆ ಆಶ್ರಮದಲ್ಲಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದೇವೆ. ಅದು 2 ವರ್ಷದ ಹಿಂದಿನ ಹುಲಿ ಚರ್ಮದ ಫೋಟೋ ಎಂದಿದ್ದಾರೆ. ಅದನ್ನು ಯಾರು ಕೊಟ್ಟರು ಎಂಬ ಮಾಹಿತಿ ಪಡೆದಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ ಎಂದು ಡಿಎಫ್ಒ ನಂದೀಶ್ ಹೇಳಿದ್ದಾರೆ.
2022 ರಲ್ಲೇ ‘ಹುಲಿ ಚರ್ಮ’ ಅರಣ್ಯ ಇಲಾಖೆಗೆ ಹಿಂದಿರುಗಿಸಲಾಗಿದೆ : ವಿನಯ್ ಗುರೂಜಿ
2022ರಲ್ಲೇ ಹುಲಿ ಚರ್ಮ ಅರಣ್ಯ ಇಲಾಖೆಗೆ ಹಿಂದಿರುಗಿಸಲಾಗಿದೆ ಎಂದು ವಿನಯ್ ಗುರೂಜಿ ಆಶ್ರಮದಿಂದ ಸ್ಪಷ್ಟನೆ ನೀಡಲಾಗಿದೆ.
ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ ಎಂದು ಆರೋಪಿಸಿ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು.
ಈ ಹಿನ್ನೆಲೆ ವಿನಯ್ ಗುರೂಜಿ ಆಶ್ರಮದಿಂದ ಸ್ಪಷ್ಟನೆ ನೀಡಲಾಗಿದ್ದು, 2 ವರ್ಷದ ಹಿಂದೆ ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಎಂಬವರು ವಿನಯ್ ಗುರೂಜಿಗೆ ಹುಲಿ ಚರ್ಮವನ್ನು ಉಡುಗೊರೆ ಯಾಗಿ ನೀಡಿದ್ದರು. ಕಿರೀಟಿಯವರು ಅರಣ್ಯ ಅಧಿಕಾರಿಗಳ ಅನುಮತಿ ಪಡೆದು ಉಡುಗೊರೆ ನೀಡಿದ್ದರು ಎಂದು ಸ್ಪಷ್ಟನೆ ನೀಡಲಾಗಿದೆ.