ಮೈಸೂರು: ರಾಮನಗರ ಜಿಲ್ಲೆಯಲ್ಲಿರುವ ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೇನೆ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಕನಕಪುರದ ಜನ ತಮ್ಮ ಆಸ್ತಿಗಳನ್ನು ಮಾರಿಕೊಳ್ಳಬೇಡಿ. ಆಸ್ತಿ, ಜಮೀನು ಉಳಿಸಿಕೊಳ್ಳುವಂತೆ ಹೇಳಿದ್ದೇನೆ ಎಂದಿದ್ದಾರೆ.
ಕನಕಪುರವನ್ನು ಬೆಂಗಳೂರಿಗೆ ಸೇರಿಸುವುದಾಗಿ ಹೇಳಿರುವ ಡಿ.ಕೆ.ಶಿವಕುಮಾರ್ ಹೇಳಿಕೆ ಹಿಂದೆ ದುರುದ್ದೇಶವಿದೆ ಎಂದು ಬೇನಾಮಿ ಆಸ್ತಿ ಬಾಂಬ್ ಸಿಡಿಸಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅವರು ಸಿಎಂ ಆಗಿದ್ದವರು, ಪ್ರಜ್ಞಾವಂತರು ಎಂದಿಕೊಂಡಿದ್ದೆ. ಆದರೆ ಅವರಿಗೆ ಕಾಮನ್ ಸೆನ್ಸ್ ಇಲ್ಲ. ದೇಶಕ್ಕೆ ವಿದ್ಯಾವಂತರು, ಬುದ್ಧಿವಂತರು ಇಲ್ಲದಿದ್ದರೂ ಪ್ರಜ್ಞಾವಂತರು ಬೇಕು ಎಂದು ಟಾಂಗ್ ನೀಡಿದ್ದಾರೆ.
ರಾಮನಗರ, ಕನಕಪುರ, ಚನ್ನಪಟ್ಟಣದ ಜನ ಭೂಮಿಯನ್ನು ಮಾರಿಕೊಂಡು ಹೋಗಬೆಡಿ. ಮುಂದಿನ ದಿನಗಳಲ್ಲಿ ಒಳ್ಳೆ ಬೆಲೆ ಬರಲಿದೆ ಎಂದು ಹೇಳಿದ್ದೇನೆ. ಕೋವಿಡ್ ನಂತರ ನಮ್ಮ ಜನ ಭೂಮಿ ಮಾರಿಕೊಳ್ಳುತ್ತಿದ್ದಾರೆ. ಇದು ನಿಲ್ಲಬೇಕು. ಕನಕಪುರ ಮಾತ್ರವಲ್ಲ ರಾಮನಗರ, ಚನ್ನಪಟ್ಟಣ ಎಲ್ಲವೂ ಬೆಂಗಳೂರಿಗೆ ಸೇರಿದ್ದು. ನಾವೆಲ್ಲರೂ ಬೆಂಗಳೂರಿನವರೇ. ರಾಮನಗರ ಜಿಲ್ಲೆಗೆ ಏನು ಮಾಡಬೇಕು ಎಂಬ ನೀಲಿ ನಕ್ಷೆ ಇದೆ. ರಾಮನಗರ ಬೆಂಗಳೂರಿಗೆ ಸೇರಿದ್ದು. ಕುಮಾರಸ್ವಾಮಿ ಏನೇನೋ ಹೇಳುತ್ತಾರೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದರು.