ಬೆಂಗಳೂರು: ಪ್ರೊಬೇಷನರಿ ಅವಧಿ ಮುಗಿದ ನಂತರ ಸೇವೆ ಸಹಜವಾಗಿ ಕಾಯಂ ಆಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಯಾವುದೇ ವ್ಯಕ್ತಿ ಉದ್ಯೋಗಕ್ಕೆ ಸೇರಿದಾಗ ಪ್ರೊಬೇಷನರಿ ಅವಧಿ ಮುಗಿದ ಬಳಿಕ ಉದ್ಯೋಗದಾತ ಸಂಸ್ಥೆ ಸೇವೆಯ ಕಾಯಂ ಆದೇಶ ಹೊರಡಿಸಿದರೆ ಮಾತ್ರ ಉದ್ಯೋಗಿಯ ಸೇವೆ ಕಾಯಂ ಆಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ಸಿವಿಲ್ ನ್ಯಾಯಾಲಯದಲ್ಲಿ ಶೀಘ್ರ ಲಿಪಿಕಾರರಾಗಿದ್ದ ತಮ್ಮನ್ನು ಸೇವೆಯಿಂದ ವಜಾಗೊಳಿಸಿದ ಕ್ರಮ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಬಗ್ಗೆ ಆದೇಶ ನೀಡಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗಿಯ ಪೀಠದಲ್ಲಿ ವಿಚಾರಣೆ ನಡೆದು ಈ ಆದೇಶ ನೀಡಲಾಗಿದೆ. ಉದ್ಯೋಗಿ ಪ್ರೊಬೇಷನರಿ ಅವಧಿ ಮುಗಿದ ನಂತರ ಸೇವೆಯಲ್ಲಿ ಮುಂದುವರೆಯಬಹುದು. ಆದರೆ, ಅವರ ಸೇವೆ ಸಹಜವಾಗಿ ಕಾಯಂ ಆಗುವುದಿಲ್ಲ. ನಿಯಮಗಳಲ್ಲಿ ಪ್ರೊಬೇಷನರಿ ಮುಗಿದ ನಂತರ ಸೇವೆ ಕಾಯಂ ಆಗುತ್ತದೆ ಎಂದು ಉಲ್ಲೇಖಿಸಿಲ್ಲ. ಸೇವೆ ಕಾಯಂ ಆಗಬೇಕಾದರೆ ಉದ್ಯೋಗದಾತ ಸಂಸ್ಥೆಯಿಂದ ಪ್ರತ್ಯೇಕ ಆದೇಶ ಹೊರಡಿಸಬೇಕು ಎಂದು ಹೈಕೋರ್ಟ್ ಹೇಳಿದೆ.