
ಅವರು ಇಂದು ಶಿವಮೊಗ್ಗ ಸಮೀಪದ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಸಕ್ತ ಸಾಲಿನ ಭದ್ರಾ ಜಲಾಶಯದ 83ನೇ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈಗಾಗಲೇ ರಾಜ್ಯದ ಉಪಮುಖ್ಯಮಂತ್ರಿಗಳು ಈ ಸಂಬಂಧ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿದ್ದರ ಮೇರೆಗೆ ದಿನಾಂಕ ನಿಗಧಿಪಡಿಸಿ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ, ಅದರ ಸದ್ಭಳಕೆ ಹಾಗೂ ರೈತರ ಹಿತ ಕಾಯುವಲ್ಲಿ ಇರಬಹುದಾದ ಸಾಧಕ-ಬಾದಕಗಳ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಲ್ಲಿ ಚರ್ಚಿಸಿ, ರೈತ ಮುಖಂಡರ, ಅಧಿಕಾರಿಗಳ ಹಾಗೂ ತಜ್ಞರ ಅಭಿಪ್ರಾಯ ಪಡೆದು, ಈಗಾಗಲೇ ಬೆಳೆಯಲಾಗಿರುವ ಭತ್ತ, ಬೇಸಿಗೆ ಹಂಗಾಮಿನಲ್ಲಿ ಅಡಿಕೆ, ತೆಂಗು ಮತ್ತು ತೋಟಗಾರಿಕೆ ಬೆಳೆಗಳ ಸಂರಕ್ಷಣೆ ಹಾಗೂ ಈ ಭಾಗದ ಜನರ ಕುಡಿಯುವ ನೀರಿನ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಚ್ಚುಕಟ್ಟು ಪ್ರದೇಶದ ಬೆಳೆಗಾರರಿಗೆ ಅನುಕೂಲವಾಗುವಂತೆ ಮತ್ತೊಮ್ಮೆ ಶೀಘ್ರದಲ್ಲಿ ಸಭೆ ನೀರಾವರಿ ಸಮಿತಿ ಸಭೆ ಕರೆದು ಚರ್ಚಿಸಲಾಗುವುದು. ಕೃಷಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ರೈತರ ಹಿತ ಕಾಯುವಲ್ಲಿ ಸರ್ಕಾರ ಬದ್ಧವಾಗಿದೆ ಎಂದರು. ಆದಾಗ್ಯೂ ವಿಳಂಬವಾದರೂ ಮುಂದಿನ ಕೆಲವೇ ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಹೊಂದಲಾಗಿದೆ. ನಿರೀಕ್ಷೆಯಂತೆ ಮಳೆ ಬಂದಲ್ಲಿ ರೈತರ ಎಲ್ಲಾ ಸಮಸ್ಯೆಗಳಿಗೆ ಸಹಜವಾಗಿ ಪರಿಹಾರ ದೊರೆಯಲಿದೆ. ರೈತ ಮುಖಂಡರು ನೀಡಿದ ಸಲಹೆಯಂತೆ ಎಡದಂಡೆ ನಾಲೆಯಲ್ಲಿ ನೀರು ಹರಿಸುವುದನ್ನು ಇಂದಿನಿಂದಲೆ ನಿಲ್ಲಿಸಲು ಸೂಚನೆ ನೀಡಲಾಗಿದೆ. ಅಲ್ಲದೇ ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲ ಪ್ರದೇಶದ ನಿವಾಸಿಗಳಿಗೆ ಕುಡಿಯುವ ನೀರನ್ನು ಒದಗಿಸಲು ಗಮನಹರಿಸಲಾಗುವುದು ಎಂದರು.

