ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು ವಾರ್ಷಿಕ 10 ಮಿಲಿಯನ್ ಯುನಿಟ್ ಮಾರಾಟಕ್ಕೆ ಬೆಳೆಯುವ ನಿರೀಕ್ಷೆಯಿದೆ. 2030 ರ ವೇಳೆಗೆ 50 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಪಾದಿಸಿದ್ದಾರೆ.
ನವದೆಹಲಿಯಲ್ಲಿ ಸುರಕ್ಷಿತ, ಸುಸ್ಥಿರ ಭಾರತೀಯ ಇವಿ ಮಾನದಂಡಗಳ ಕುರಿತ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಸಚಿವರು, 2030 ರ ವೇಳೆಗೆ ದೇಶದ ಎಲೆಕ್ಟ್ರಿಕ್ ವೆಹಿಕಲ್(ಇವಿ) ಮಾರುಕಟ್ಟೆಯು 10 ಮಿಲಿಯನ್ ಯುನಿಟ್ ವಾರ್ಷಿಕ ಮಾರಾಟಕ್ಕೆ ಬೆಳೆಯುವ ನಿರೀಕ್ಷೆಯಿದೆ. ಅಲ್ಲದೇ, 50 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದರು.
2070 ರ ವೇಳೆಗೆ ಇಂಗಾಲದ ತಟಸ್ಥ ದೇಶವಾಗಲು ವಿದ್ಯುತ್ ಚಲನಶೀಲತೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿದ ಅವರು ಇಲ್ಲಿಯವರೆಗೆ ದೇಶದಲ್ಲಿ ಮೂರು ಮಿಲಿಯನ್ ಇವಿಗಳನ್ನು ನೋಂದಾಯಿಸಲಾಗಿದೆ ಎಂದು ಹೇಳಿದರು. .
ಭಾರತವು ಜಪಾನ್ ಅನ್ನು ಮೀರಿಸುವ ಮೂಲಕ ವಿಶ್ವದ ಮೂರನೇ ಅತಿದೊಡ್ಡ ಆಟೋಮೊಬೈಲ್ ಉದ್ಯಮವಾಗಿದೆ, ಆದಾಗ್ಯೂ, ಮಾಲಿನ್ಯವು ಉದ್ಯಮಕ್ಕೆ ದೊಡ್ಡ ಸವಾಲಾಗಿ ಮುಂದುವರೆದಿದೆ. ರಾಷ್ಟ್ರ ರಾಜಧಾನಿಯೊಂದರಲ್ಲೇ ವಾಯು ಮಾಲಿನ್ಯ ಮತ್ತು ಟ್ರಾಫಿಕ್ ಜಾಮ್ ತಗ್ಗಿಸಲು ಸುಮಾರು 65 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದರು.
ಪರಿಸರದ ಮೇಲೆ ಮಾತ್ರವಲ್ಲದೆ ಭಾರತದ ಆರ್ಥಿಕತೆಯ ಮೇಲೂ ಮಾಲಿನ್ಯದ ದುಷ್ಪರಿಣಾಮವನ್ನು ಎತ್ತಿ ಹಿಡಿದ ಸಚಿವರು, ಭಾರತವು ತನ್ನ ಪಳೆಯುಳಿಕೆ ಇಂಧನದ 85 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.