ಪ್ರವಾಸಕ್ಕೆ ಹೋದಾಗ ಹೋಟೆಲ್, ರೆಸಾರ್ಟ್ ಅಥವಾ ಹೋಮ್ ಸ್ಟೇಗಳಲ್ಲಿ ರೂಮ್ ಬುಕ್ಕಿಂಗ್ ಮಾಡುವುದು ಸಾಮಾನ್ಯ. ಹಲವಾರು ಬಾರಿ ಬುಕಿಂಗ್ ಮಾಡಿದ ನಂತರವೂ ತುರ್ತು ಸಂದರ್ಭದಲ್ಲಿ ಅದನ್ನು ರದ್ದುಗೊಳಿಸಬೇಕಾಗುತ್ತದೆ. ಚೀನಾದ ಕೂಡ ದಂಪತಿ ಮಾಡಿದ್ದ ಬುಕ್ಕಿಂಗ್ ಅನ್ನು ರದ್ದು ಮಾಡಲು ದಕ್ಷಿಣ ಕೊರಿಯಾದ ಹೋಟೆಲ್ ಒಂದು ನಿರಾಕರಿಸಿತ್ತು.
ಇದರಿಂದ ರೊಚ್ಚಿಗೆದ್ದ ದಂಪತಿ ಹೋಟೆಲ್ ಸಿಬ್ಬಂದಿಗೆ ಬುದ್ಧಿ ಕಲಿಸಲು ಮಾಡಿರೋ ಕೃತ್ಯ ಪ್ರಪಂಚದಾದ್ಯಂತ ವೈರಲ್ ಆಗಿದೆ. ಬುಕಿಂಗ್ ರದ್ದುಗೊಳಿಸದೇ ಇದ್ದಿದ್ದರಿಂದ ದಂಪತಿ ದಕ್ಷಿಣ ಕೊರಿಯಾದ ಹೋಟೆಲ್‌ನಲ್ಲಿ ತಂಗಿದ್ದಾರೆ. ಬುಕಿಂಗ್ ಅನ್ನು ರದ್ದುಗೊಳಿಸುವ ವಿನಂತಿಯನ್ನು ತಿರಸ್ಕರಿಸಿದ್ದರಿಂದ ಹೋಟೆಲ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. 25 ದಿನಗಳ ಕಾಲ ಕೊಠಡಿಯಲ್ಲಿನ ಅಡುಗೆ ಅನಿಲದ ಟ್ಯಾಪ್ ತೆರೆದು ಬಿಟ್ಟಿದ್ದಾರೆ.
ಅಷ್ಟೇ ಅಲ್ಲ ಸಾಕಷ್ಟು ವಿದ್ಯುತ್ ಬಳಸಿದ್ದಾರೆ. ದಂಪತಿ 120 ಟನ್‌ಗಳಷ್ಟು ನೀರನ್ನು ವ್ಯರ್ಥ ಮಾಡಿದ್ದಾರೆ. ಸುಮಾರು 730 ಡಾಲರ್ ಮೌಲ್ಯದ ವಿದ್ಯುತ್ ಅನ್ನು ಪೋಲು ಮಾಡಿದ್ದಾರೆ. ದಂಪತಿ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ 25 ದಿನಗಳಿಗಾಗಿ ವಿಲ್ಲಾವನ್ನು ಬುಕ್ ಮಾಡಿದ್ದಾರೆ. ಬೆಲೆ ನೋಡದೆ, ವಿಲ್ಲಾ ಎಲ್ಲಿದೆ ಎಂಬುದನ್ನೂ ಗಮನಿಸದೇ ಹಣವನ್ನೂ ಪೂರ್ತಿ ಪಾವತಿಸಿದ್ದಾರೆ. ವಿಲ್ಲಾ ನಗರದ ಹೊರಭಾಗದಲ್ಲಿದೆ ಎಂಬುದು ಗೊತ್ತಾದಾಗ ಬುಕ್ಕಿಂಗ್ ಕ್ಯಾನ್ಸಲ್ ಮಾಡಲು ನಿರ್ಧರಿಸಿದರು.
ಆದರೆ ಹೋಟೆಲ್ ಸಿಬ್ಬಂದಿ ಬುಕ್ಕಿಂಗ್ ಕ್ಯಾನ್ಸಲ್ ಮಾಡಲು ಒಪ್ಪಲೇ ಇಲ್ಲ. ಇದರಿಂದ ಕೋಪಗೊಂಡ ದಂಪತಿ ಹೋಟೆಲ್‌ನ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಾಮಾನ್ಯಕ್ಕಿಂತ 5 ಪಟ್ಟು ಹೆಚ್ಚು ನೀರು ಬಳಕೆ ಮಾಡಿದ್ದಾರೆ. ವಿದ್ಯುತ್ ಹಾಗೂ ಅಡುಗೆ ಅನಿಲವನ್ನು ಕೂಡ ಬೇಕಾಬಿಟ್ಟಿ ಬಳಸಿದ್ದಾರೆ. ಆದರೆ ಅಂತಿಮವಾಗಿ ಎಲ್ಲಾ ಬಿಲ್‌ಗಳನ್ನು ದಂಪತಿಯೇ ಪಾವತಿಸಬೇಕಾಗಿಬಂತು. ದಂಪತಿಯ ಈ ಕೃತ್ಯ ಜಾಲತಾಣಗಳಲ್ಲಿ ಕೂಡ ವೈರಲ್ ಆಗಿದೆ.