ಬೆಂಗಳೂರು : ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಬಿಜೆಪಿ ಹೈಕಮಾಂಡ್ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದು, ಭಾನುವಾರ ರಾತ್ರಿ ದೆಹಲಿಗೆ ಪ್ರಯಾಣ ಬೆಳಸಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ವಿಪಕ್ಷ ನಾಯಕ ಸೇರಿದಂತೆ ಪ್ರಮುಖ ಹುದ್ದೆಗಳ ಭರ್ತಿ ಮಾಡುವ ಸಂಬಂಧ ಹೈಕಮಾಂಡ್ ಆಹ್ವಾನ ನೀಡಿದೆ ಎಂದು ಹೇಳಲಾಗುತ್ತಿದೆ.
ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದು, ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ರಾಜ್ಯ ಬಿಜೆಪಿಯಲ್ಲಿನ ವಿಪಕ್ಷ ನಾಯಕ ಸ್ಥಾನ ಸೇರಿದಂತೆ ಪ್ರಮುಖ ಹುದ್ದೆಗಳ ಭರ್ತಿ ಮಾಡುವ ಸಂಬಂಧ ಮಹತ್ವದ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.