ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಸರ್ಕಾರ ಮುಂದಾಗಿದ್ದು, ಆಗಸ್ಟ್ 7ರಂದು ಉನ್ನತ ಮಟ್ಟದ ಸಭೆ ನಡೆಸಲಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಂದು ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಭೂಮಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಗುರಿ ನಿಗದಿಪಡಿಸಲಾಗಿದೆ. ಒತ್ತುವವರಿ ಆದ ಸರ್ಕಾರಿ ಭೂಮಿ ಪ್ರಮಾಣದ ಬಗ್ಗೆ ಎ.ಟಿ. ರಾಮಸ್ವಾಮಿ ವರದಿ, ಬಾಲಸುಬ್ರಹ್ಮಣ್ಯ ವರದಿ ಸೇರಿದಂತೆ ಹಲವು ವರದಿಗಳು ನಮ್ಮ ಮುಂದಿದ್ದು, ಅದನ್ನೇ ಆಧಾರವಾಗಿಟ್ಟುಕೊಂಡು ಒತ್ತುವ ತೆರವು ಕಾರ್ಯಾಚರಣೆ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದ್ದಾರೆ.
ಪ್ರತಿ ತಿಂಗಳು ಇಂತಿಷ್ಟು ಪ್ರಮಾಣದ ಒತ್ತುವರಿ ತೆರವು ಮಾಡಲು ಗುರಿ ನಿಗದಿಪಡಿಸಲಾಗುವುದು. ವಿಭಾಗ ಮತ್ತು ಜಿಲ್ಲಾಮಟ್ಟದಲ್ಲಿ ಸರಣಿ ಸಭೆಗಳನ್ನು ನಡೆಸಲಾಗುವುದು. ಒತ್ತುವರಿ ತೆರವಾದ ಭೂಮಿಯನ್ನು ರಕ್ಷಿಸಲು ಕ್ರಮ ಕೈಗೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ಭೂಮಿ ತೆರವುಗೊಳಿಸಿದ ನಂತರ ರೆವಿನ್ಯೂ ಇನ್ಸ್ ಪೆಕ್ಟರ್ ಗಳು ಮತ್ತೆ ಒತ್ತುವರಿಯಾಗದಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.