ಬೀದರ್: ಬೀದರ್ ಜಿಲ್ಲೆಯ ಭೋರಲಿಂಗೇಶ್ವರ ದೇವಾಲಯದಲ್ಲಿ ಅಚ್ಚರಿಯೊಂದು ನಡೆಯುತ್ತಿದ್ದು, ಕಲ್ಲಿನ ಬಸವಣ್ಣನ ಪವಾಡ ನೋಡಲು ಭಕ್ತರು ಮುಗಿಬಿದ್ದಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಪ್ರಸಿದ್ಧ ಭೋರಲಿಂಗೇಶ್ವರ ದೇವಸ್ಥಾನದಲ್ಲಿ ನಂದಿ ವಿಗ್ರಹ ಹಾಲು ಕುಡಿಯುತ್ತಿದ್ದು, ಈ ವಿಸ್ಮಯವನ್ನು ಕಂಡು ಗ್ರಾಮಸ್ಥರು ಬೆರಗಾಗಿದ್ದಾರೆ.
ದೇವಾಲಯದಲ್ಲಿರುವ ಕಲ್ಲಿನ ನಂದಿ ವಿಗ್ರಹ ಹಾಲು, ಅರಿಶಿನ ನೀರನ್ನು ಕುಡಿಯುತ್ತಿದೆ. ಹಾಲು, ಅರಿಶಿನ ನಿರನ್ನು ಚಮಚದಲ್ಲಿ ನಂದಿ ವಿಗ್ರಹದ ಬಾಯಿಗೆ ಇಟ್ಟರೆ ಕ್ಷಣಾರ್ಧದಲ್ಲಿ ಖಾಲಿಯಾಗುತ್ತಿದೆ. ಪವಾಡವನ್ನು ಕಂಡು ಚಕಿತರಾಗಿರುವ ಭಕ್ತಾದಿಗಳು ಹಾಲನ್ನು ತಂದು ಚಮಚದಲ್ಲಿ ನಂದಿ ವಿಗ್ರಹಕ್ಕೆ ಕುಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಒಂದೆಡೆ ಧಾರಾಕಾರ ಮಳೆಯಾಗುತ್ತಿದ್ದು, ಈ ಮಧ್ಯೆ ಈ ವಿಸ್ಮಯಕಾರಿ ಘಟನೆ ಕಂಡು ಪವಾಡವೆಂದು ನಂಬಿರುವ ಭಕ್ತರು ಮನೆಯಿಂದ ಹಾಲು ತಂದು, ಸರತಿ ಸಾಲಿನಲ್ಲಿ ನಿಂತು ಕಲ್ಲಿನ ನಂದಿ ವಿಗ್ರಹಕ್ಕೆ ಕುಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.