ಬೆಂಗಳೂರು : ಸತತ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಹಾಲಿನ ದರ ಬೆಲೆ ಹೆಚ್ಚಳದ ಬೆನ್ನಲ್ಲೇ ಹೋಟೆಲ್ ಊಟ, ತಿಂಡಿ ದರ ಹೆಚ್ಚಳಕ್ಕೆ ಹೋಟೆಲ್ ಮಾಲೀಕರು ಚಿಂತನೆ ನಡೆಸಿದ್ದಾರೆ.
ಹೌದು, ಈ ಹಿನ್ನೆಲೆ ಹೋಟೆಲ್ ಮಾಲೀಕರ ಅಸೋಸಿಯೇಷನ್ ಇಂದು ಸಂಜೆ 6 ಗಂಟೆಗೆ ಸಭೆ ನಡೆಸಲಿದ್ದು, ಸಭೆಯಲ್ಲಿ ದರ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ನೇತೃತ್ವದಲ್ಲಿ ಸಭೆ ಸೇರಲು ನಿರ್ಧರಿಸಲಾಗಿದೆ.
ಈಗಾಗಲೇ ಶೇ 10 ರಷ್ಟು ಬೆಲೆ ಏರಿಕೆ ಮಾಡುವ ಕುರಿತು ಚರ್ಚೆ ನಡೆದಿದ್ದು, ಆದರೆ 20 % ಹೆಚ್ಚಳಕ್ಕೆ ಕೆಲವು ಹೋಟೆಲ್ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ರೆ ಆಗಸ್ಟ್ 1 ರಿಂದಲೇ ನೂತನ ದರ ಜಾರಿಗೆ ಬರಲಿದೆ. ಈ ಮೂಲಕ ಹೋಟೆಲ್ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ರಾಜ್ಯದಲ್ಲಿ ಈಗಾಗಲೇ ವಿದ್ಯುತ್, ತರಕಾರಿ, ಅಕ್ಕಿ, ಬೇಳೆ ಕಾಳುಗಳ ಬೆಲೆಗಳು ಗಗನಕ್ಕೇರಿದ್ದು, ಹೊಟೇಲ್ ಉದ್ಯಮವನ್ನ ಸಂಕಷ್ಟಕ್ಕೆ ದೂಡಿದೆ ಇದರ ಜೊತೆ ವಿದ್ಯುತ್, ಹಾಲಿನ ದರ ಏರಿಕೆ ಬರೆ ಮಾಲೀಕರನ್ನ ಕಂಗೆಡಿಸಿದೆ.ಹೀಗಾಗಿ ನಷ್ಟ ಸರಿದೂಗಿಸಲು ಅನಿವಾರ್ಯವಾಗಿ ಆಗಸ್ಟ್ 1 ರಿಂದ ಹೋಟೆಲ್ ಊಟ, ತಿಂಡಿ, ಟೀ,ಕಾಫಿ ಬೆಲೆಯಲ್ಲಿ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.