ಬೆಂಗಳೂರು: ಅನ್ನಭಾಗ್ಯ ಅಕ್ಕಿ ವಿಚಾರ ಮಾತ್ರವಲ್ಲ, ರಾಜ್ಯಕ್ಕೆ ಸಿಗಬೇಕಾದ ಸ್ಪೆಷಲ್ ಗ್ರಾಂಟ್ಸ್ ಗೂ ಕೇಂದ್ರ ಹಣಕಾಸು ಸಚಿವರು ಅಡ್ಡಿಪಡಿಸಿದ್ದಕ್ಕೆ ನಿಮ್ಮ ಉತ್ತರ ಏನು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ನಾಯಕರನ್ನ ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಅನ್ಯಾಯ ಮಾಡ್ತಿರೋದು ಕಣ್ಮುಂದೆ ಇರುವಾಗ ನೀವು ಏಕೆ ಕೇಂದ್ರ ಬಿಜೆಪಿ ನಾಯಕರ ಮುಂದೆ ಬಾಯಿ ಬಿಡ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಜಿಎಸ್.ಟಿ ಯಲ್ಲಿ ರಾಜ್ಯಕ್ಕೆ ಆಗುವ ನಷ್ಠ ಪರಿಹಾರವಾಗಿ 15 ನೇ ಹಣಕಾಸು ಆಯೋಗ ಕರ್ನಾಟಕಕ್ಕೆ 5495 ಕೋಟಿ ಹಣವನ್ನ ವಿಶೇಷ ಅನುದಾನವನ್ನಾಗಿ ನೀಡಲು ವರದಿಯಲ್ಲಿ ಹೇಳಿತ್ತು. ಆದರೆ ಈ ಸ್ಷೆಷಲ್ ಗ್ರಾಂಟ್ಸ್ ಕೊಡುವ ಕುರಿತು ಮರುಪರಿಶೀಲನೆ ನಡೆಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಯೋಗಕ್ಕೆ ಪತ್ರ ಬರೆದು ರಾಜ್ಯಕ್ಕೆ ಸಿಗಬೇಕಾದ ಅನುದಾನಕ್ಕೆ ಅಡ್ಡಿಯಾದರು. ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾಗಿ ಕರ್ನಾಟಕಕ್ಕೆ ಸಹಾಯ ಮಾಡುವ ಬದಲು ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ. ಇದನ್ನ ಅನ್ಯಾಯ ಅನ್ನದೇ ಏನನ್ನಬೇಕು ? ಎಂದು ಕೇಳಿದರು.
ನಮ್ಮದೇ ರಾಜ್ಯದಿಂದ ಆಯ್ಕೆ ಆಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಬಿಜೆಪಿ ನಾಯಕರು ಪ್ರೆಶ್ನಿಸಿ ರಾಜ್ಯಕ್ಕೆ ಸಿಗಬೇಕಾದ ಗ್ರಾಂಟ್ಸ್ ಕೊಡಿಸಬಹುದಿತ್ತು. ಆದರೆ ನೀವು ಬಾಯಿ ಬಿಡ್ತಿಲ್ಲ. 9 ವರ್ಷಗಳಲ್ಲಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ಏನು ಕೊಟ್ಟಿದೆ ಎಂಬುದರ ಬಗ್ಗೆ ನೀವು ಅಂಕಿ ಅಂಶಗಳನ್ನ ನೀಡಿ. ಏಲ್ಲೆಲ್ಲಿ ಅನ್ಯಾಯ ಆಗಿದೆ ಎಂಬ ಅಂಕಿ ಅಂಶಗಳ ಸಮೇತ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ನಾಯಕರಿಗೆ ಬಹಿರಂಗ ಸವಾಲು ಹಾಕಿದರು.