500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ ಬಳಿಕ ಬಿಡುಗಡೆ ಮಾಡಲಾಗಿದ್ದ 2000 ನೋಟುಗಳನ್ನು ಈಗ ಹಿಂದಕ್ಕೆ ಪಡೆಯಲಾಗಿದೆ. ಈ ಆದೇಶ ಜಾರಿಯಾದ ಬಳಿಕ ಶೇಕಡ 85ರಷ್ಟು ನೋಟುಗಳು ಠೇವಣಿ ಹಾಗೂ ಬದಲಾವಣೆ ರೂಪದಲ್ಲಿ ಮರಳಿ ಖಜಾನೆ ಸೇರಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಈ ಮಾಹಿತಿ ನೀಡಿದ್ದು, 3.62 ಲಕ್ಷ ಕೋಟಿಯಷ್ಟು 2000 ಮುಖಬೆಲೆಯ ನೋಟುಗಳನ್ನು ಜಾರಿಗೆ ತರಲಾಗಿದ್ದು, ಈ ಪೈಕಿ 2.41 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ಬ್ಯಾಂಕುಗಳಿಗೆ ಹಿಂದಿರುಗಿವೆ ಎಂದು ತಿಳಿಸಿದ್ದಾರೆ.
2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಬದಲಾವಣೆಗೆ ಸೆಪ್ಟೆಂಬರ್ 30ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಅಂದಿನ ಪರಿಸ್ಥಿತಿಯನ್ನು ಅವಲೋಕಿಸಿ ಈ ಅವಧಿಯನ್ನು ವಿಸ್ತರಿಸಬೇಕೇ ಬೇಡವೇ ಎಂಬುದರ ಕುರಿತು ರಿಸರ್ವ್ ಬ್ಯಾಂಕ್ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.