ಕೊರಿಯಾದ ಯುವ ಗಾಯಕ ಚೋಯ್ ಸುಂಗ್-ಬಾಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2011 ರಲ್ಲಿ ಕೊರಿಯಾಸ್ ಗಾಟ್ ಟ್ಯಾಲೆಂಟ್ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿದ್ದ ಗಾಯಕ ಚೋಯ್ ಸುಂಗ್-ಬಾಂಗ್ ಬುಧವಾರ ಆತ್ಮಹತ್ಯೆ ಮಾಡಿಕೊಂಡಿರುವ ಶಾಕಿಂಗ್ ಸುದ್ದಿ ಹೊರಬಿದ್ದಿದೆ.
ಅವರಿಗೆ 33 ವರ್ಷ ವಯಸ್ಸಾಗಿತ್ತು. ಸಿಯೋಲ್ ಪೊಲೀಸರ ಪ್ರಕಾರ ಮಂಗಳವಾರ ದಕ್ಷಿಣ ಸಿಯೋಲ್‌ನ ಯೊಕ್ಸಾಮ್-ಡಾಂಗ್ ಜಿಲ್ಲೆಯ ಅವರ ಮನೆಯಲ್ಲಿ ಚೋಯ್ ಶವವಾಗಿ ಪತ್ತೆಯಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಖ್ಯಾತಿ ಗಳಿಸಿದ್ದರೂ ಅವರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವುದಾಗಿ ಹೇಳಿಕೊಂಡು ವಿವಾದ ಹುಟ್ಟುಹಾಕಿದ್ದರು.
ಚೋಯ್ ಸುಂಗ್-ಬಾಂಗ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿ ಹಲವಾರು ರೀತಿಯಲ್ಲಿ ನಿಧಿ ಸಂಗ್ರಹಣೆಯ ಅಭಿಯಾನ ನಡೆಸಿದ ನಂತರ ಭಾರೀ ವಿವಾದಕ್ಕೀಡಾಗಿದ್ದರು.
ಅವರು ತಮ್ಮ ಹಣಕಾಸಿನ ತೊಂದರೆಗಳನ್ನು ಪ್ರಸ್ತಾಪಿಸಿದ್ದರು ಮತ್ತು ಅವರ ಇತ್ತೀಚಿನ ಆಲ್ಬಂಗಾಗಿ ಹಣದ ಅಗತ್ಯವಿದೆ ಎಂದು ಹೇಳಿದ್ದರು. ನಂತರ ಅದು ನೆಪ ಎಂಬುದು ಗೊತ್ತಾಯಿತು. ಚೋಯ್ ಕೂಡ ಅದನ್ನ ಒಪ್ಪಿಕೊಂಡು ಪಡೆದ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ನಾನು ಪ್ರಸ್ತುತ ಕ್ಯಾನ್ಸರ್ ನಿಂದ ಬಳಲುತ್ತಿಲ್ಲ ಎಂದು ಹೇಳಿದ್ದರು.
ಅವರ ಸಾವಿಗೆ ಒಂದು ದಿನ ಮೊದಲು ಅವರು ಯೂಟ್ಯೂಬ್‌ನಲ್ಲಿ ಆತ್ಮಹತ್ಯೆಯನ್ನು ಸೂಚಿಸುವ ಟಿಪ್ಪಣಿಯನ್ನು ಅಪ್‌ಲೋಡ್ ಮಾಡಿದ್ದಾರೆ. ನನ್ನ ಮೂರ್ಖತನದ ತಪ್ಪಿನಿಂದ ನೊಂದವರಿಗೆ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.
ಚೋಯ್ ಸುಂಗ್-ಬಾಂಗ್, ಕೊರಿಯನ್ ಲೇಬಲ್ ಬಾಂಗ್ ಬಾಂಗ್ ಕಂಪನಿಯೊಂದಿಗೆ ರೆಕಾರ್ಡಿಂಗ್ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅವರು ಸಾಕಷ್ಟು ಪ್ರಸಿದ್ಧರಾಗಿದ್ದು ಜಸ್ಟಿನ್ ಬೈಬರ್, ಬೋಎ, ಮತ್ತು ಜಂಗ್-ಹ್ವಾ ಉಮ್ ಮುಂತಾದ ದೊಡ್ಡ ವ್ಯಕ್ತಿಗಳಿಂದ ಪ್ರಶಂಸೆ ಗಳಿಸಿದ್ದರು.