ಮುಂಬೈ: ನಟ, ರೂಪದರ್ಶಿ ಮತ್ತು ಕಾಸ್ಟಿಂಗ್ ಸಂಯೋಜಕ ಆದಿತ್ಯ ಸಿಂಗ್ ರಜಪೂತ್ ಮುಂಬೈನ ಅಂಧೇರಿ ಪ್ರದೇಶದಲ್ಲಿನ ಅವರ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ನಟನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ. ರಜಪೂತ್ ಸಾವಿಗೆ ಕಾರಣ ತಿಳಿದಿಲ್ಲ. ಇಂದು ಮಧ್ಯಾಹ್ನ ಓಶಿವಾರಾ ಪ್ರದೇಶದಲ್ಲಿನ ತಮ್ಮ ಅಪಾರ್ಟ್‌ಮೆಂಟ್‌ನ ಸ್ನಾನಗೃಹದಲ್ಲಿ ಕುಸಿದು ಬಿದ್ದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಟನ ಸರ್ವೆಂಟ್ ಬೀಳುವುದನ್ನು ಗಮನಿಸಿ ಕಟ್ಟಡದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು, ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ನಾವು ಇಲ್ಲಿಯವರೆಗೆ ರಜಪೂತ್ ಸಾವಿನ ಬಗ್ಗೆ ಅನುಮಾನಾಸ್ಪದವಾಗಿ ಏನನ್ನೂ ಕಂಡುಕೊಂಡಿಲ್ಲ. ಆಕಸ್ಮಿಕ ಸಾವಿನ ವರದಿಯನ್ನು(ಎಡಿಆರ್) ದಾಖಲಿಸಲಾಗಿದೆ. ಅವರ ದೇಹವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ. ಅತಿಯಾದ ಡ್ರಗ್ಸ್ ಸೇವನೆಯಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಆದಿತ್ಯ ಸಿಂಗ್ ರಜಪೂತ್ ಅವರು ತನ್ನ ವೃತ್ತಿಜೀವನವನ್ನು ಮಾಡೆಲ್ ಆಗಿ ಪ್ರಾರಂಭಿಸಿದರು. ‘ಕ್ರಾಂತಿವೀರ್’ ಮತ್ತು ‘ಮೈನೆ ಗಾಂಧಿ ಕೋ ನಹಿಂ ಮಾರಾ’ ಸೇರಿದಂತೆ ಚಲನಚಿತ್ರಗಳ ಭಾಗವಾಗಿದ್ದರು. ಅವರು ರಿಯಾಲಿಟಿ ಶೋ, ಸ್ಪ್ಲಿಟ್ಸ್ವಿಲ್ಲಾ(Splitsvilla) 9, ಲವ್, ಆಶಿಕಿ, ಕೋಡ್ ರೆಡ್, ಆವಾಜ್ ಸೀಸನ್ 9, ಬ್ಯಾಡ್ ಬಾಯ್ ಸೀಸನ್ 4 ಸೇರಿದಂತೆ ಅನೇಕ ಟಿವಿ ಶೋ ಭಾಗವಾಗಿದ್ದರು.