ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗಳಿಸಿ ಭರ್ಜರಿ ಬಹುಮತ ಸಾಧಿಸಿದೆ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ವಿಚಾರ ಈಗ ಹೈಕಮಾಂಡ್ ಅಂಗಳ ತಲುಪಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ದೆಹಲಿ ತಲುಪಿದ್ದಾರೆ.
ಇನ್ನು ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸದಾಶಿವನಗರದ ತಮ್ಮ ನಿವಾಸದಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಂದ ಅಭಿನಂದನೆಗಳನ್ನು ಸ್ವೀಕರಿಸುತ್ತಿದ್ದು, ಇದರ ಮಧ್ಯೆ ಸುದ್ದಿಗೋಷ್ಠಿ ನಡೆಸಿದ ಅವರು ಖಾಸಗಿ ಕಾರ್ಯಕ್ರಮ ಮುಗಿದ ಬಳಿಕ ನಾನೂ ಕೂಡ ದೆಹಲಿಗೆ ತೆರಳುತ್ತೇನೆ ಎಂದಿದ್ದಾರೆ.
ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ನವದೆಹಲಿಗೆ ತೆರಳಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಹೈಕಮಾಂಡ್ ವೀಕ್ಷಕರು ಈಗಾಗಲೇ ಶಾಸಕರ ಬಳಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇದನ್ನು ಈಗಾಗಲೇ ವರಿಷ್ಠರಿಗೆ ನೀಡಿದ್ದು, ಅದನ್ನು ಆಧರಿಸಿ ಮುಂದಿನ ಮುಖ್ಯಮಂತ್ರಿ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.