ಮೈಸೂರು: ಕಾಂಗ್ರೆಸ್ ಕರ್ನಾಟಕವನ್ನು ಭಾರತದಿಂದ ವಿಂಗಡಿಸಲು ಪ್ರಯತ್ನಿಸುತ್ತಿದೆ. ಕರ್ನಾಟಕ ಭಾರತದ ಅವಿಭಾಜ್ಯ ಅಂಗ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ನಂಜನಗೂಡಿನ ಎಲಚಗೆರೆಬೋರೆಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಚುನಾವಣೆ ಇತಿಹಾಸ ರಚಿಸಲಿದೆ. ದೇಶದಲ್ಲಿಯೇ ಕರ್ನಾಟಕವನ್ನು ನಂಬರ್ ಒನ್ ರಾಜ್ಯವನ್ನಾಗಿ ಮಾಡುವುದು ಬಿಜೆಪಿ ಗುರಿಯಾಗಿದೆ. ವಿಶ್ವದ ಪ್ರಮುಖ ಮೊಬೈಲ್ ಕಂಪನಿಗಳು ಕರ್ನಾಟಕಕ್ಕೆ ಬರುತ್ತಿವೆ. ಇಂತಹ ಅಭಿವೃದ್ಧಿ ಪ್ರತಿಯೊಬ್ಬ ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ನವರು ಕುಹಕವಾಡಿದ್ದರು. ರೈತರು ಬೆಳೆಯುವ ಮಸಾಲೆ ಪದಾರ್ಥಗಳ ಬಗ್ಗೆ ಸಲಹೆ ನೀಡಲಾಗಿತ್ತು. ಆದರೆ ಕಾಂಗ್ರೆಸ್ ನವರು ರೈತರಿಗೆ ಅವಮಾನ ಮಾಡಿದರು. ಇಂದು ಕಾಂಗ್ರೆಸ್ ಲಿಂಗಾಯಿತ ಸಮುದಾಯಕ್ಕೆ ಅಪಮಾನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಇದ್ದರೆ ದೇಶದಲ್ಲಿ ಉಗ್ರರು ಬಾಲಬಿಚ್ಚುತ್ತಾರೆ. ಭಯೋತ್ಪಾದಕರ ಮೇಲೆ ಕಾಂಗ್ರೆಸ್ ನವರ ಆಶೀರ್ವಾದ ಇದೆ ಎಂದು ಕಿಡಿಕಾರಿದರು.
ನಮ್ಮ ದೇಶದಲ್ಲಿ ಗಾಂಧಿ ಕುಟುಂಬ ವಿದೇಶಿ ಶಕ್ತಿಗಳಿಗೆ ಅವಕಾಶ ನೀಡುತ್ತಿದೆ. ನಾನು ತುಂಬಾ ನೋವಿನಿಂದ ಈ ಮಾತು ಹೇಳುತ್ತಿದ್ದೇನೆ. ಇಂತಹ ವಿಚಾರಗಳನ್ನು ನಾನು ಎಂದಿಗೂ ಸಹಿಸಲ್ಲ. ನಮ್ಮ ದೇಶದಲ್ಲಿ ವಿದೇಶಿಗರು ಮೂಗು ತೂರಿಸುವುದು ಬೇಕಾಗಿಲ್ಲ. ಭಯೋತ್ಪಾದನೆ, ಅರಾಜಕತೆಯನ್ನು ಬಿಜೆಪಿ ಎಂದೂ ಸಹಿಸಲ್ಲ ಎಂದು ಗುಡುಗಿದರು.
ಕಾಂಗ್ರೆಸ್ ನವರು ಕರ್ನಾಟಕವನ್ನು ದೇಶದಿಂದ ಪ್ರತ್ಯೇಕ ಎಂದು ಪರಿಗಣಿಸುತ್ತಿದ್ದಾರೆ. ಕರ್ನಾಟಕವನ್ನು ದೇಶದಿಂದ ವಿಂಗಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಪ್ರತಿಯೊಬ್ಬ ಕನ್ನಡಿಗರು ಕಾಂಗ್ರೆಸ್ ನ ಈ ವಿಚ್ಛಿದ್ರ ನೀತಿಯ ಬಗ್ಗೆ ಎಚ್ಚರವಾಗಿರಿ. ಕರ್ನಾಟಕ ಭಾರತದ ಅವಿಭಾಜ್ಯ ಅಂಗ. ರಾಷ್ಟ್ರಕವಿ ಕುವೆಂಪು ಅವರೇ ಹೇಳಿದ್ದಾರೆ. ಸಮಾಜವನ್ನು ವಿಂಗಡಿಸುವುದೇ ಕಾಂಗ್ರೆಸ್ ಪಕ್ಷದ ಇತಿಹಾಸ. ಕಾಂಗ್ರೆಸ್ ನ ಇಂತಹ ದುರುದ್ದೇಶವನ್ನು ಎಂದೂ ಕ್ಷಮಿಸಬೇಡಿ. ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ವಾಕ್ಪ್ರಹಾರ ನಡೆಸಿದ್ದಾರೆ.