ತುಮಕೂರು: ಕಳೆದ 35 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಶತ್ರುಗಳು ಬಹಳ ಕಡಿಮೆ ಇರಬಹುದು ಎಂದುಕೊಂಡಿದ್ದೇನೆ. ಹಳೇ ದ್ವೇಷ ಇದ್ದರೆ ಅದನ್ನು ಈ ರೀತಿ ತೀರಿಸಿಕೊಳ್ಳಬಾರದು ಎಂದು ಮಾಜಿ ಡಿಸಿಎಂ, ಕಾಂಗ್ರೆಸ್ ಹಿರಿಯ ನಾಯಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ನಿನ್ನೆ ಜಿ.ಪರಮೇಶ್ವರ್ ತಲೆಗೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಬೈರೇನಹಳ್ಳಿ ಕ್ರಾಸ್ ಬಳಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಜೆಸಿಬಿಯಲ್ಲಿ ಹೂ ಹಾಕಲು ರೆಡಿ ಮಾಡಿದ್ದರು. ಈ ವೇಳೆ ನನ್ನನ್ನು ಮೇಲಕ್ಕೆ ಎತ್ತಬೇಡಿ ಎಂದು ಹೇಳಿದರೂ ಕಾರ್ಯಕರ್ತರು ನನ್ನನ್ನು ಮೇಲಕ್ಕೆ ಎತ್ತಿದರು. ಅಷ್ಟರಲ್ಲಿ ತಲೆಗೆ ಏನೋ ಹೊಡೆದಂತಾಯಿತು. ಕೆಂಪು ಹೂವಾದ ಕಾರಣ ಯಾರಿಗೂ ಗೊತ್ತಾಗಲಿಲ್ಲ. ನಾನು ನೋವಿನಿಂದ ಕೂಗಿಕೊಂಡಾಗ ನಮ್ಮ ವೈದ್ಯರು ತಕ್ಷಣ ಬಂದು ಚಿಕಿತ್ಸೆ ನೀಡಿದರು. ಘಟನೆ ಹೇಗಾಯಿತು ಎಂದು ಹೇಳುವುದು ಕಷ್ಟ. ಯಾರೋ ದುಷ್ಕರ್ಮಿಗಳು ಕಲ್ಲು ಎಸದಿರಬಹುದು ಎಂದು ಹೇಳಿದ್ದಾರೆ.
ಯಾವ ಉದ್ದೇಶಕ್ಕೆ ಹೀಗೆ ಮಾಡಿರಬಹುದು ಎಂದು ಹೇಳುವುದು ಕಷ್ಟ. ಹೂವಿನಲ್ಲಿ ಅಷ್ಟು ದೊಡ್ಡ ಕಲ್ಲು ಬರಲು ಸಾಧ್ಯವಿಲ್ಲ. ಯಾರೋ ದುಷ್ಕರ್ಮಿಗಳು ಹಾಕಿರಬಹುದು. ಕಲ್ಲೇಟಿನಿಂದಾಗಿ ತಲೆಯಲ್ಲಿ ಒಂದುವರೆ ಇಂಚು ಗಾಯವಾಗಿದೆ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಹಿಂದೆ 1999ರಲ್ಲಿ ನನಗೆ ಚಾಕುವಿನಿಂದ ತಿವಿಯಲು ಯತ್ನಿಸಿದ್ದರು. ನನ್ನ ವಿರಿದ್ಧ ಪದೇ ಪದೇ ಯಾಕೆ ಹೀಗೆ ಆಗುತ್ತಿದೆ ಗೊತ್ತಿಲ್ಲ. ತನಿಖೆ ಮೂಲಕ ಸತ್ಯ ಹೊರಬರಬೇಕಿದೆ ಎಂದು ತಿಳಿಸಿದ್ದಾರೆ.