ಜೀವನದ ಪ್ರಮುಖ ಘಟ್ಟ ಎಂದೇ ಪರಿಗಣಿಸಲ್ಪಡುವ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಈಗಾಗಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಅಂಕಗಳ ಕೂಡಿಕೆ ಕಾರ್ಯ ಪೂರ್ಣಗೊಂಡಿದ್ದು, ಏಪ್ರಿಲ್ 24 ಅಥವಾ 25 ರಂದು ಫಲಿತಾಂಶ ಪ್ರಕಟವಾಗಲಿದೆ.
ಮೌಲ್ಯಮಾಪನ ಕಾರ್ಯ ಆರಂಭವಾಗುವ ಸಂದರ್ಭದಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಯೂ ಘೋಷಣೆಯಾಗಿದ್ದ ಕಾರಣ ಉಪನ್ಯಾಸಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಿದರೆ ಫಲಿತಾಂಶ ವಿಳಂಬವಾಗಬಹುದು ಎಂದು ಹೇಳಲಾಗಿತ್ತು. ಆದರೆ ನಿಗದಿಯಂತೆ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದೆ.
2022 – 23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 9 ರಿಂದ ಮಾರ್ಚ್ 29 ರವರೆಗೆ ನಡೆದಿದ್ದು, 1,109 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಬರೆಯಲು 7,27,387 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಇದೀಗ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.