ಸಂಪೂರ್ಣ ಮದ್ಯ ನಿಷೇಧದ ನಡುವೆಯೂ ಬಿಹಾರದಲ್ಲಿ ಮದ್ಯ ಮಾಫಿಯಾ ಮುಂದುವರಿದಿದ್ದು ಬಿಹಾರದ ಮೋತಿಹಾರಿಯಲ್ಲಿ ಭಾನುವಾರ ಕನಿಷ್ಠ 20 ಜನರನ್ನು ಬಂಧಿಸಲಾಗಿದೆ.
ಭಾರೀ ಪ್ರಮಾಣದ ನಕಲಿ ಮದ್ಯವನ್ನು ವಿವಿಧ ಗ್ರಾಮಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಏತನ್ಮಧ್ಯೆ ನಕಲಿ ಮದ್ಯ ಸೇವನೆ ಪ್ರಕರಣದಲ್ಲಿ ಸಾವಿನ ಸಂಖ್ಯೆ 14 ಕ್ಕೆ ಏರಿದ್ದು, ಸುಮಾರು 48 ಜನ ಅಸ್ವಸ್ಥರಾಗಿದ್ದಾರೆ.
ಐವರ ಸ್ಥಿತಿ ಚಿಂತಾಜನಕವಾಗಿರುವ ಕಾರಣ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೂರ್ವ ಚಂಪಾರಣ್ ಜಿಲ್ಲಾಡಳಿತ ಹೊರಡಿಸಿದ ಹೇಳಿಕೆಯ ಪ್ರಕಾರ, ಮೋತಿಹಾರಿಯ ವಿವಿಧ ಪ್ರದೇಶಗಳಲ್ಲಿ ಶೋಧ ನಡೆಸಿದ ನಂತರ ಅಕ್ರಮ ಮದ್ಯದ ವ್ಯಾಪಾರದಲ್ಲಿ ತೊಡಗಿರುವ 20 ಜನರನ್ನು ಬಂಧಿಸಲಾಗಿದೆ.
ಅವರ ವಶದಿಂದ ಸುಮಾರು 85.5 ಲೀಟರ್ ದೇಶ ನಿರ್ಮಿತ ಮದ್ಯ ಮತ್ತು ಅಪಾರ ಪ್ರಮಾಣದ ಭಾರತೀಯ ನಿರ್ಮಿತ ವಿದೇಶಿ ಮದ್ಯವನ್ನು (ಐಎಂಎಫ್‌ಎಲ್) ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಶನಿವಾರದ ಮಧ್ಯರಾತ್ರಿ ತುರ್ಕೌಲಿಯಾ, ಹರ್ಸಿದ್ಧಿ, ಸುಗೌಲಿ ಮತ್ತು ಪಹರ್‌ಪುರ ಪ್ರದೇಶಗಳಲ್ಲಿ ಕೆಲವು ಗ್ರಾಮಸ್ಥರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಯಿತು. ತಕ್ಷಣ ಪೊಲೀಸ್ ತಂಡಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಕೂಡ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ರಾಜ್ಯ ಸರ್ಕಾರವು ಏಪ್ರಿಲ್ 5, 2016 ರಂದು ಮದ್ಯದ ಮಾರಾಟ ಮತ್ತು ಸೇವನೆಯ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿತು.