ಪುರುಷ – ಮಹಿಳೆಯರ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಹೆರಿಗೆಗೂ ಮುನ್ನ ಭ್ರೂಣ ಲಿಂಗ ಪತ್ತೆ ಮಾಡುವುದನ್ನು ನಿಷೇಧಿಸಿರುವುದಲ್ಲದೆ ಅದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದೆ. ಹೀಗಾಗಿ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಈ ಫಲಕವನ್ನು ಕಡ್ಡಾಯವಾಗಿ ಅಳವಡಿಸುವುದರ ಜೊತೆಗೆ ಅದನ್ನು ಪಾಲಿಸಬೇಕಿದೆ.
ಇಷ್ಟಾದರೂ ಕೂಡ ಕೆಲವರು ಭ್ರೂಣಲಿಂಗ ಪರೀಕ್ಷೆ ಮಾಡಿಸುವ ಮೂಲಕ ಹೆಣ್ಣು ಮಗು ಎಂದು ಗೊತ್ತಾದರೆ ಆರಂಭದಲ್ಲಿಯೇ ಅದನ್ನು ತೆಗೆಸಿಕೊಳ್ಳಲು ಮುಂದಾಗುತ್ತಾರೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲೂ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ಅತಿ ಹೆಚ್ಚಿನ ನಿಗಾ ಇಡಲಾಗಿರುತ್ತದೆ.
ಇದರ ಮಧ್ಯೆಯೂ ಶಿವಮೊಗ್ಗ ಜಿಲ್ಲೆ ಸಾಗರದ ಸಂಜೀವಿನಿ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪರೀಕ್ಷೆ ಮಾಡಲಾಗಿದೆ ಎಂಬ ಮಾಹಿತಿ ತಮಗೆ ಬಂದ ಬಳಿಕ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದು, ಇದೀಗ ಸ್ಕ್ಯಾನಿಂಗ್ ಯಂತ್ರ ಸೀಜ್ ಮಾಡಲಾಗಿದೆ.