
ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೊಮ್ಮೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಜೀವ ಬೆದರಿಕೆ ಬಂದಿದೆ. ಇತ್ತೀಚೆಗೆ ನಟನಿಗೆ ಬೆದರಿಕೆ ಹಾಕಿರುವ ಎರಡನೇ ಘಟನೆ ಇದಾಗಿದೆ. ಈ ಸಂಬಂಧ ಬಾಂದ್ರಾ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಪರಿಚಿತರಾಗಿರುವ ಸಲ್ಮಾನ್ ಖಾನ್ ಅವರ ಸ್ನೇಹಿತನಿಂದ ಶನಿವಾರ ಬಾಂದ್ರಾ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಮಧ್ಯಾಹ್ನ ಸಲ್ಮಾನ್ ಖಾನ್ ಅವರಿಗೆ ಇಮೇಲ್ ಬಂದಿತ್ತು ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಇತ್ತೀಚಿನ ಸಂದರ್ಶನವನ್ನು ದೂರಿನಲ್ಲಿ ಉಲ್ಲೇಖಿಸಿದೆ.
ರಾಪರ್ ಮತ್ತು ಗಾಯಕ ಸಿಧು ಮೂಸ್ ವಾಲಾ ಹತ್ಯೆ ಪ್ರಕರಣದಲ್ಲಿ ಬಿಷ್ಣೋಯ್ ಹೆಸರು ಕೇಳಿಬಂದಿತ್ತು. ನಂತರ ಈ ಪ್ರಕರಣದಲ್ಲಿ ಬಂಧಿಸಿ ಜೈಲು ಸೇರಿದ್ದಾರೆ.
ಅಧಿಕಾರಿಯೊಬ್ಬರು ಸಲ್ಮಾನ್ ಖಾನ್ ಅವರಿಗೆ ಹೊಸದಾಗಿ ಬೆದರಿಕೆ ಹಾಕಿರುವುದನ್ನು ದೃಢಪಡಿಸಿದ್ದಾರೆ. ನೀವು ಲಾರೆನ್ಸ್ ಬಿಷ್ಣೋಯ್ ಅವರ ಇತ್ತೀಚಿನ ಸಂದರ್ಶನವನ್ನು ನೋಡಿರಬೇಕು, ಅದನ್ನು ಸಲ್ಮಾನ್ ಖಾನ್‌ಗೆ ತೋರಿಸಿ ಮತ್ತು ಗೋಲ್ಡಿ ಬ್ರಾರ್ ಅವರೊಂದಿಗೆ ಮಾತನಾಡಬೇಕು ಎಂದು ಸಲ್ಮಾನ್ ಖಾನ್ ಗೆ ಧಮ್ಕಿ ಹಾಕಲಾಗಿದೆ. ಈ ಸಂಬಂಧ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಸಲ್ಮಾನ್ ತಂದೆ ಸಲೀಂ ಖಾನ್ ಅವರಿಗೆ ಕಳೆದ ವರ್ಷ ಜೂನ್ 5 ರಂದು ಬೆದರಿಕೆ ಪತ್ರ ಬಂದಿತ್ತು. ಈ ಸಂಬಂಧ ಬಾಂದ್ರಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.