ಮಂಡ್ಯ: ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗೆಯೇನು ಎಂದು ಕೇಳುವ ಸಮಯ ಬಂದಿದೆ. ಭದ್ರ ಕೋಟೆ ಅಂತೀರಾ. ಆದರೆ ಮಂಡ್ಯ ಭದ್ರ ಕೋಟೆಗಾಗಿ ಏನು ಮಾಡಿದ್ದೀರಿ? ಎಂದು ಜೆಡಿಎಸ್ ನಾಯಕರ ವಿರುದ್ಧ ಸಂಸದೆ ಸುಮಲತಾ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದ ಚಾಮುಂಡಿನಗರದಲ್ಲಿ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮಾತೆ ಆಶಿರ್ವಾದ ಪಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದೆ ಸುಮಲತಾ, ಈ ಮಾರ್ಚಿಗೆ ನಾನು ರಾಜಕೀಯ ಪ್ರವೇಶ ಮಾಡಿ ಸುಮಾರು ನಾಲ್ಕು ವರ್ಷಗಳಾಗುತ್ತಿವೆ. ರಾಜಕೀಯಕ್ಕೆ ನನ್ನ ಪ್ರವೇಶ ಆಕಸ್ಮಿಕ. ಇದು ಸ್ವಾರ್ಥಕ್ಕಾಗಿ ಆಗಿರಲಿಲ್ಲ ಮಂಡ್ಯದ ಹೆಮ್ಮೆಯ ಸ್ವಾಭಿಮಾನಿ ಜನತೆಗೆ ಧನ್ಯವಾದಗಳು ಎಂದರು.
ಬೆಂಗಳೂರಿನಲ್ಲಿ ನಿಲ್ಲುವಂತೆ ಅಂದು ಆಫರ್ ಬಂದಿತ್ತು. ಆದರೆ ಅಂಬರೀಶ್ ತರ ನೀವು ನಮಗೆ ಜೊತೆ ಇರಬೇಕು ಎಂದು ಜನ ಅಂದು ಕೇಳಿಕೊಂಡರು. ಜನರ ಮಾತಿಗೆ ಕಟ್ಟುಬಿದ್ದು ರಾಜಕೀಯಕ್ಕೆ ಬಂದೆ. ಸರ್ಕಾರವನ್ನೇ ಎದುರು ಹಾಕಿಕೊಂಡು ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದೆ. ಅಂದು ಸಿಎಂ ವಿರುದ್ಧವೇ ಅವರ ಮಗನ ವಿರುದ್ಧ ನಿಂತಿದ್ದು ಸ್ವಾರ್ಥಕ್ಕಾಗಿ ಅಲ್ಲ, ಮಂಡ್ಯ ಜಿಲ್ಲೆಯ ಜನತೆಗಾಗಿ. ಅಂಬರೀಶ್ ಅವರ ಅಭಿಮಾನಿಗಳಿಗಾಗಿ ಹೋರಾಟ ಮಾಡಿದೆ. ಅಂಬರೀಶ್ ಅಣ್ಣನಿಗೆ ಆಶಿರ್ವಾದ ಮಾಡಿದ ಜನತೆಗಾಗಿ ನಿಂತಿದ್ದೆ. ನಾನು ಯಾರು, ಅಂಬರೀಶ್ ಯಾರು ಎಂಬುದು ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಗೊತ್ತು.
ಯಾವುದು ಅನಿವಾರ್ಯವೂ ಅಲ್ಲ, ಯಾವುದೂ ಶಾಸ್ವತವೂ ಅಲ್ಲ. ಬೇರೆ ದಾರಿಗಳನ್ನು ಹುಡುಕಿಕೊಂಡು ಹೋಗಬೇಕಾಗಿಯೂ ಇಲ್ಲ. ನಾನು ಸಂಸದೆಯಾದ ಕೆಲದಿನಗಳಲ್ಲೇ ಕೋವಿಡ್ ಮಹಾಮಾರಿ ಬಂತು. ಆದರೂ ಛಲಬಿಡದೇ ಕ್ಷೇತ್ರದ ಕೆಲಸವನ್ನು, ಜನರ ಕೆಲಸವನ್ನು ಮಾಡಿದೆ. ನನ್ನ ತೇಜೋವಧೆಗೆ ಯತ್ನಿಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆದರೂ ನನ್ನ ಪರವಾಗಿ ನೂರಾರು ಜನ ನಿಂತಿದ್ದರು. ಜನರಿಗೆ ನನ್ನ ಮೇಲೆ ನಂಬಿಕೆ ಇತ್ತು. ನನ್ನ ಕೆಲಸವನ್ನು ಸಂಸದೆಯಾಗಿ ಪ್ರಾಮಣಿಕವಾಗಿ ಮಾಡಿದ್ದೇನೆ.
ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆಯಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂಬುದು ತಿಳಿದಾಗ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದೆ, ಭ್ರಷ್ಟಾಚಾರದ ವಿರುದ್ಧ ದ್ವನಿಯೆತ್ತಿದೆ. ಸಂಸದೆ ಎಂಬ ಗೌರವವನ್ನೂ ನೀಡಲಿಲ್ಲ, ಒಂದು ಹೆಣ್ಣು ಎಂಬುದನ್ನೂ ನೋಡಲಿಲ್ಲ. ಒಬ್ಬೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಭಾವುಕರಾದರು. ಎರಡು ಬಾರಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು. ಕೆ ಆರ್ ಎಸ್ ಸುರಕ್ಷತೆ ಬಗ್ಗೆ ಮಾತನಾಡಿದಾಗ ಏನೇನೋ ಮಾತನಾಡಿದರು. ಆದರೂ ಯಾವುದಕ್ಕೂ ಹೆದರದೇ ಪ್ರಾಮಾಣಿಕವಾಗಿ ನನ್ನ ಜವಾಬ್ದಾರಿ ನಿಭಾಯಿಸಿದ್ದೇನೆ ಎಂದು ದಳಪತಿಗಳ ವಿರುದ್ಧ ಗುಡುಗಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ನಾನು ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ನಾನು ಮನಸ್ಸು ಮಾಡದಿದ್ದರೆ ಮೈ ಶುಗರ್ ಕಾರ್ಖಾನೆ ಓಪನ್ ಆಗುತ್ತಿರಲಿಲ್ಲ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಬೀಳುತ್ತಿರಲಿಲ್ಲ. ಮಂಡ್ಯ ಜಿಲ್ಲೆಯನ್ನು ನಾವು ಕಾಪಾಡಿಕೊಳ್ಳಬೇಕಿದೆ. ಮಂಡ್ಯ ಜಿಲ್ಲೆಗೆ ಮಹಾರಾಜರ ಕೊಡುಗೆ ಅಪಾರ. ಕನ್ನಂಬಾಡಿ ಇಲ್ಲದಿದ್ದರೆ ಮಮ್ಡ್ಯ ಜಿಲ್ಲೆಯೇ ಇರುತ್ತಿರಲಿಲ್ಲ. ಇಂದು ಮೈಶುಗರ್, ಪಾಂಡವಪುರ ಕಾರ್ಖಾನೆ ಒಂದು ಹಂತಕ್ಕೆ ಬಂದಿದೆ. ಮಂಡ್ಯ ತಾಯಿ-ಮಕ್ಕಳ ಆಸ್ಪತ್ರೆಗಾಗಿ ಸತತವಾಗಿ ಹೋರಾಡಿದ್ದೇನೆ. ಬರಿ ರಾಜಕಾರಣ ಮಾಡುವುದಲ್ಲ, ಅಭಿವೃದ್ಧಿ ಕೆಲಸಗಳು ಆಗಬೇಕು ಎಬುದನ್ನು ತೋರಿಸಿದ್ದೇನೆ ಎಂದು ಹೇಳಿದರು.