ತಾಂಬೂಲ ಪ್ರಿಯರಿಗೆ ಕಹಿ ಸುದ್ದಿಯೊಂದು ಇಲ್ಲಿದೆ. ಇದೇ ಮೊದಲ ಬಾರಿಗೆ ವೀಳ್ಯದೆಲೆ ಬೆಲೆ ಮುಗಿಲು ಮುಟ್ಟಿದ್ದು, ಒಂದು ಕಟ್ಟು ವೀಳ್ಯದೆಲೆಗೆ 120 ರಿಂದ 140 ತಲುಪಿದೆ. ಅಲ್ಲದೆ 5 ರೂಪಾಯಿಗೆ 3 ಎಲೆ ಕೊಡಲಾಗುತ್ತಿದ್ದು, ಒಂದು ಎಲೆಗೆ 2 ರೂಪಾಯಿ ಪಡೆಯಲಾಗುತ್ತಿದೆ.
ಇಳುವರಿ ಕುಸಿತದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದ್ದು, ಇದಕ್ಕಿಂತ ಮೊದಲು ಸಾಮಾನ್ಯವಾಗಿ ಒಂದು ಕಟ್ಟು ವೀಳ್ಯದೆಲೆ ನಲವತ್ತು ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು. ಅಲ್ಲದೆ ಅತಿ ಹೆಚ್ಚು ಎಂದರೆ 50 ರಿಂದ 60 ರೂಪಾಯಿಗಳಿಗೆ ಮಾರಾಟವಾದ ದಾಖಲೆಯೂ ಇದೆ.
ಆದರೆ ಈ ಬಾರಿ ಒಂದು ಕಟ್ಟು ವೀಳ್ಯದೆಲೆಗೆ 120 ರಿಂದ 140 ಸಿಗುತ್ತಿದ್ದು, ಬೆಳೆಗಾರರಿಗೆ ಬಂಪರ್ ಬಂದಂತಾಗಿದೆ. ಆದರೆ ಇಳುವರಿ ಕಡಿಮೆ ಇರುವ ಕಾರಣ ಇದರ ಲಾಭ ಪಡೆಯಲು ಬೆಳೆಗಾರರಿಗೆ ಸಾಧ್ಯವಾಗುತ್ತಿಲ್ಲ. ಹೋಳಿ ಹುಣ್ಣಿಮೆ ಬಳಿಕ ವೀಳ್ಯದೆಲೆ ಬೆಲೆ ಈ ಹಿಂದಿನ ಸ್ಥಿತಿ ತಲುಪಲಿದೆ ಎಂದು ಹೇಳಲಾಗಿದೆ.