ಮಧ್ಯಪ್ರದೇಶದ ಭೋಪಾಲ್ ನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರೊಬ್ಬರು ಕ್ರಿಕೆಟ್ ಆಡುವಾಗ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದಾರೆ.
ಮೀಸಲು ಪೊಲೀಸ್ ಪಡೆಯ ಇನ್ಸ್ ಪೆಕ್ಟರ್ ದೀಪಕ್ ಪಾಟೀಲ್ (45) ಅವರು ಭಾನುವಾರ ಬೆಳಿಗ್ಗೆ ಓಲ್ಡ್ ಕ್ಯಾಂಪಿಯನ್ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರನ್ನು ರಾಷ್ಟ್ರೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಅಧಿಕೃತ ಮೂಲಗಳ ಪ್ರಕಾರ ದೀಪಕ್ ಪಾಟೀಲ್ ಭಾನುವಾರ ಬೆಳಗ್ಗೆ ಓಲ್ಡ್ ಕ್ಯಾಂಪಿಯನ್ ಮೈದಾನದಲ್ಲಿ ಸಹ ಪೊಲೀಸ್ ಸಿಬ್ಬಂದಿಯೊಂದಿಗೆ ಕ್ರಿಕೆಟ್ ಆಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನೆಲದ ಮೇಲೆ ಕುಸಿದುಬಿದ್ದರು.
ಸ್ಥಳದಲ್ಲಿದ್ದ ಸಹ ಪೊಲೀಸ್ ಅಧಿಕಾರಿಗಳು ಅವರನ್ನು ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ (CPR) ಗೆ ಒಳಪಡಿಸಿದರು. ನಂತರ ಅವರನ್ನು ಓಲ್ಡ್ ಕ್ಯಾಂಪಿಯನ್ ಮೈದಾನದ ಬಳಿ ಇರುವ ರಾಷ್ಟ್ರೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪಾಟೀಲ್ ಅವರ ಆರೋಗ್ಯದ ಬಗ್ಗೆ ತಿಳಿಯಲು ಭೋಪಾಲ್ ಪೊಲೀಸ್ ಕಮಿಷನರ್ ಮಕರಂದ್ ದಿಯೋಸ್ಕರ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಆಸ್ಪತ್ರೆಗೆ ಆಗಮಿಸಿದ್ದರು.