ದೇಶಾದ್ಯಂತ ಸಾಕಷ್ಟು ಸದ್ದು ಮಾಡಿದ್ದ ದೆಹಲಿಯ 35 ಪೀಸ್ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಶ್ರದ್ಧಾ ವಾಕರ್ ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸ್ ಇನ್ನೊಂದು ಮುಖ್ಯವಾದ ವಿಷಯವನ್ನ ಬಹಿರಂಗ ಮಾಡಿದ್ದಾರೆ.
ಅಸಲಿಗೆ ಶ್ರದ್ಧಾ ಆಕೆಯ ಇನ್ನೊಬ್ಬ ಗೆಳಯನೊಬ್ಬನನ್ನ ಭೇಟಿಯಾಗುವುದು ಅಫ್ತಾಬ್‌ಗೆ ಕಿಂಚಿತ್ತು ಇಷ್ಟವಿರಲಿಲ್ಲ. ಅದಕ್ಕೆ ಅಫ್ತಾಬ್, ಶ್ರದ್ಧಾ ಮೇಲೆ ಕೋಪಗೊಂಡಿದ್ದ ಎಂದು ವಿಚಾರಣೆ ಸಮಯದಲ್ಲಿ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಜಂಟಿ ಪೊಲೀಸ್ ಆಯುಕ್ತರಾಗಿರುವ ಮೀನು ಚೌಧರಿಯವರು ಹೇಳುವ ಪ್ರಕಾರ “ಘಟನೆಯ ದಿನ ಶ್ರದ್ಧಾ ತಮ್ಮ ಸ್ನೇಹಿತನ್ನ ಭೇಟಿಯಾಗಲು ಹೋಗಿದ್ದಳು. ಅದು ಪೂನಾವಾಲಾಗೆ ಸುತಾರಾಂ ಇಷ್ಟವಿರಲಿಲ್ಲ. ಇದು ವಾದ-ವಿವಾದದಿಂದ ಶುರುವಾಗಿ ಹೊಡೆದಾಟದ ತನಕ ತಲುಪಿದೆ. ಕೊನೆಗೆ ಹಿಂಸಾಚಾರಕ್ಕೆ ತಿರುಗಿದ ಈ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ“ ಎಂದು ಹೇಳಿದ್ದಾರೆ.
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, “ಶ್ರದ್ಧಾ ಡೇಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯವಾದ 27 ವರ್ಷದ ಯುವಕನನ್ನು ಭೇಟಿಯಾಗಲು ಹೋಗಿದ್ದಳು. ಈ ವಿಷಯ ಅಫ್ತಾಬ್ ಗೆ ಗೊತ್ತಾಗ್ತಿದ್ದ ಹಾಗೆಯ ಆತ ಕೆಂಡಾಮಂಡಲ ಆಗಿದ್ದನು. ಯಾವಾಗ ಶ್ರದ್ಧಾ ಮನೆಗೆ ಹಿಂದಿರುಗಿದ್ದಳೋ ಆಕೆಯ ಮೇಲೆ ತನ್ನ ಕೋಪವನ್ನೆಲ್ಲ ಹೊರಹಾಕಿದ್ದಾನೆ. ಇದೇ ಕೋಪದ ಭರದಲ್ಲಿ ಆಕೆಯನ್ನ ಕೊಂದಿದ್ದಾನೆ“ ಎಂದು ಹೇಳಿದ್ದಾರೆ.
ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಪೂನಾವಾಲಾ ವಿರುದ್ಧ ಪೊಲೀಸರು ಮಂಗಳವಾರ 6,629 ಪುಟಗಳ ಚಾರ್ಜಶೀಟ್ ಸಲ್ಲಿಸಿದ್ದು, ಫೆಬ್ರವರಿ 7 ರವರೆಗೆ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.
ಸದ್ಯಕ್ಕೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ಮತ್ತು 201 ರ ಅಡಿಯಲ್ಲಿ ಮಂಗಳವಾರ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೂ ಈ ಕೊಲೆಗೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.