ಧಾರವಾಡ: ಶೀಘ್ರವೇ ಯುವ ನೀತಿ ಜಾರಿಗೊಳಿಸಿ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೃಷಿ ವಿವಿ ರೈತ ಜ್ಞಾನ ಕೇಂದ್ರದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಎಂ, ರಾಜ್ಯ ಸರ್ಕಾರ ಸ್ವಾಮಿ ವಿವೇಕಾನಂದರ ಸಂದೇಶದಿಂದ ಪ್ರೇರಿತವಾದ ಯುವ ನೀತಿ ರೂಪಿಸುತ್ತಿದೆ. ಶಿಕ್ಷಣ, ಕ್ರೀಡೆ, ಸಂಸ್ಕೃತಿ, ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಯುವ ನೀತಿ ಜಾರಿಗೊಳಿಸಿ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಗಳನ್ನು ರೂಪಿಸಲಾಗಿದೆ. ಆರ್ಥಿಕ ನೆರವು ಯೋಜನೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಮೂಲಕ 5 ಲಕ್ಷ ಜನರಿಗೆ ಸ್ವಯಂ ಉದ್ಯೋಗ ನೀಡಲಾಗುವುದು. ಅಮೃತ ಕ್ರೀಡಾ ಯೋಜನೆಯಡಿ 75 ಕ್ರೀಡಾಪಟುಗಳನ್ನು ದತ್ತು ಪಡೆದು ತರಬೇತಿಯೊಂದಿಗೆ ಶಿಕ್ಷಣ ನೀಡಲಾಗುವುದು. ಗ್ರಾಮೀಣ ಕ್ರೀಡಾಕೂಟಗಳ ಮೂಲಕ ಗ್ರಾಮಾಂತರ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದ್ದಾರೆ.