ಜರ್ಮನಿ: ಆಸ್ಪತ್ರೆಯ ಪಕ್ಕದ ಬೆಡ್ ನಲ್ಲಿದ್ದಾಕೆಯ ವೆಂಟಿಲೇಟರ್ ಅನ್ನು ಎರಡು ಬಾರಿ ಸ್ವಿಚ್ ಆಫ್ ಮಾಡಿದ ಅಮಾನವೀಯ ಘಟನೆಯೊಂದು ಜರ್ಮನಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 72 ವರ್ಷದ ಮಹಿಳೆ ವಿರುದ್ಧ ದೂರು ದಾಖಲಾಗಿದೆ.
ನೈಋತ್ಯ ನಗರದ ಮ್ಯಾನ್ಹೈಮ್ನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ನರಹತ್ಯೆಗೆ ಯತ್ನಿಸಿದ ಆರೋಪ ಈ ಮಹಿಳೆ ಮೇಲಿದೆ. ಈಕೆ ತನ್ನ ಪಕ್ಕದಲ್ಲಿ ಇರುವ 79 ವರ್ಷದ ಮಹಿಳೆಯ ವೆಂಟಿಲೇಟರ್ ಅನ್ನು ಸ್ವಿಚ್ ಆಫ್ ಮಾಡಿದ್ದಳು.
ರೋಗಿಗೆ ಇದು ಅತ್ಯಗತ್ಯ ಎಂದು ಸಿಬ್ಬಂದಿ ಹೇಳಿದ್ದರೂ, ಸಂಜೆಯ ನಂತರ ಅದನ್ನು ಮತ್ತೆ ಸ್ವಿಚ್ ಆಫ್ ಮಾಡಿದ್ದಳು. ಅದರ ಶಬ್ದದಿಂದ ತನಗೆ ತೊಂದರೆಯಾಗುತ್ತಿತ್ತು. ಅದಕ್ಕಾಗಿ ಹೀಗೆ ಮಾಡಿದೆ ಎಂದು ಆರೋಪಿ ಮಹಿಳೆ ಹೇಳಿದ್ದಾಳೆ.
ಈಕೆಯ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ತಾಯಿಯ ಪರ ಮಗ ವಾದಿಸಿದ್ದಾನೆ. ಮಹಿಳೆಯನ್ನು ಕೊಲ್ಲುವ ಉದ್ದೇಶ ತನ್ನ ತಾಯಿಗೆ ಇರಲಿಲ್ಲ. ಅವರು ಕೂಡ ರೋಗಿಯೇ. ವೆಂಟಿಲೇಟರ್ ತೆಗೆದರೆ ಸಾವು ಸಂಭವಿಸುತ್ತದೆ ಎಂದು ಗೊತ್ತಿರಲಿಲ್ಲ. ಕಿರಿಕಿರಿಯಾಗುತ್ತಿರುವುದರಿಂದ ಹೀಗೆ ಮಾಡಿದ್ದರು ಎಂದಿದ್ದಾನೆ. ಸದ್ಯ ತನಿಖೆ ನಡೆಯುತ್ತಿದೆ. ಮಹಿಳೆಯ ಜೀವಕ್ಕೆ ಸದ್ಯ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.