ಪಾರ್ಟಿಗೆ ಇದು ಹೇಳಿಮಾಡಿಸಿದಂತಹ ತಿನಿಸು. ಪನೀರ್ ಮಂಚೂರಿಯನ್ನು ಸ್ಟಾರ್ಟರ್ ಆಗಿ ಎಲ್ರೂ ಲೈಕ್ ಮಾಡ್ತಾರೆ. ಇಲ್ಲಾ ಅಂದ್ರೆ ಫ್ರೈಡ್ ರೈಸ್ ಮತ್ತು ನೂಡಲ್ಸ್ ಜೊತೆಗೆ ಸೈಡ್ಸ್ ಆಗಿಯೂ ಇದನ್ನು ಸರ್ವ್ ಮಾಡಬಹುದು. ಇದು ಮೂಲತಃ ಚೈನೀಸ್ ರೆಸಿಪಿ, ಆದ್ರೆ ಇಂಡಿಯನ್ ಟೇಸ್ಟ್ ಗೆ ತಕ್ಕಂತೆ ಬದಲಾಗಿದೆ. ಇದನ್ನು ತಯಾರಿಸೋದು ಕೂಡ ಅತ್ಯಂತ ಸುಲಭ.
ಬೇಕಾಗುವ ಸಾಮಗ್ರಿ : 9 ಪನೀರ್ ನ ಚಿಕ್ಕ ಚಿಕ್ಕ ತುಣುಕುಗಳು, ಅರ್ಧ ಕಪ್ ಮೈದಾಹಿಟ್ಟು, 2 ಚಮಚ ಕಾರ್ನ್ ಫ್ಲೋರ್, ಒಂದೂವರೆ ಚಮಚ ಅಚ್ಚಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಕಪ್ ನೀರು, ಕರಿಯಲು ಎಣ್ಣೆ.
3 ಚಮಚ ಎಣ್ಣೆ, ಸಣ್ಣಗೆ ಹೆಚ್ಚಿದ 1 ಚಮಚ ಶುಂಠಿ, ಸಣ್ಣಗೆ ಹೆಚ್ಚಿದ ಎರಡು ಬೆಳ್ಳುಳ್ಳಿ ಎಸಳು, ಸಣ್ಣಗೆ ಹೆಚ್ಚಿದ ಅರ್ಧ ಈರುಳ್ಳಿ, ಅರ್ಧ ಕಪ್ ಟೊಮೆಟೋ ಸಾಸ್, ಒಂದು ಚಮಚ ಸೋಯಾ ಸಾಸ್, ಒಂದು ಚಮಚ ವಿನಿಗರ್, ಹೆಚ್ಚಿದ ಸ್ಪ್ರಿಂಗ್ ಆನಿಯನ್.
ಮಾಡುವ ವಿಧಾನ : ಒಂದು ದೊಡ್ಡ ಬೌಲ್ ನಲ್ಲಿ ಮೈದಾಹಿಟ್ಟು ಮತ್ತು ಕಾರ್ನ್ ಫ್ಲೋರ್ ಮಿಕ್ಸ್ ಮಾಡಿ. ಅದಕ್ಕೆ ಒಂದು ಚಮಚ ಅಚ್ಚಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಅಗತ್ಯವಿರುವಷ್ಟು ನೀರನ್ನು ಹಾಕಿ ಕಲಸಿಕೊಳ್ಳಿ. ನಂತಹ ಕಲಸಿದ ಹಿಟ್ಟಿನಲ್ಲಿ ಪನೀರ್ ತುಂಡುಗಳನ್ನು ಅದ್ದಿ, ಹೊಂಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ. ಕಿಚನ್ ಪೇಪರ್ ಸಹಾಯದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಿ.
ದೊಡ್ಡ ಕಡಾಯಿಯಲ್ಲಿ 3 ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ತಕ್ಷಣ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹುರಿಯಿರಿ. ನಂತರ ಟೊಮೊಟೋ ಸಾಸ್, ಸೋಯಾ ಸಾಸ್ ಮತ್ತು ವಿನಿಗರ್ ಬೆರೆಸಿ. ಸ್ವಲ್ಪ ಉಪ್ಪು ಮತ್ತು ಅರ್ಧ ಚಮಚ ಅಚ್ಚಖಾರದ ಪುಡಿ ಹಾಕಿ ತೊಳಸಿ. ಸಾಸ್ ಸ್ವಲ್ಪ ಗಟ್ಟಿಯಾಗುವವರೆಗೆ ಅಂದ್ರೆ ಒಂದು ನಿಮಿಷ ತೊಳಸುತ್ತಾ ಇರಿ. ನಂತರ ಕರಿದಿಟ್ಟಿದ್ದ ಪನೀರ್, ಹೆಚ್ಚಿಟ್ಟಿದ್ದ ಸ್ಪ್ರಿಂಗ್ ಆನಿಯನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಿಸಿಬಿಸಿ ಇದ್ದಾಗಲೇ ಸವಿಯಲು ಕೊಡಿ.