ಕೆಲವು ಮಕ್ಕಳಂತೂ ವಿಪರೀತ ತಂಟೆಕೋರರಾಗಿರುತ್ತಾರೆ. ಅವರನ್ನು ಹಿಡಿದಿಡುವುದೇ ಕಷ್ಟವಾಗುತ್ತದೆ. ಹಾಗಿರುವಾಗ ಕೆಲವೊಮ್ಮೆ ನಾವು ಮನೆಗೆ ಬಂದ ಅತಿಥಿಗಳ ಮುಂದೆಯೇ ಮಕ್ಕಳನ್ನು ಬಯ್ದು ಬಿಡುತ್ತೇವೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಅದೆಂಥಾ ಪರಿಣಾಮ ಬೀರುತ್ತದೆ ಗೊತ್ತೇ…?
ಮಗುವಿನ ಮನಸ್ಸು ಎಷ್ಟು ಎಳೆಯದೋ ಅಷ್ಟೇ ಮೃದುವಾಗಿಯೂ ಇರುತ್ತದೆ. ಹಾಗಾಗಿ ನೀವು ಬೈದ ಬೈಗುಳ ಮನಸ್ಸಿನ ಗೋಡೆಗೆ ಅಂಟಿ ಕೂರುತ್ತದೆ. ಅದು ಗೆಳೆಯರ ಬಳಿ ಅಥವಾ ಶಿಕ್ಷಕರ ಬಳಿ ವ್ಯವಹರಿಸುವಾಗ ಆ ಪದಗಳನ್ನು ಬಳಸಬಹುದು. ಹಾಗಾಗಿ ಮಕ್ಕಳ ಬಳಿ ಮಾತನಾಡುವಾಗ ತಪ್ಪಿಯೂ ಕೆಟ್ಟ ಪದ ಬಳಸದಿರಿ.
ಮಕ್ಕಳೂ ಬಹು ಬೇಗ ಅವಮಾನಿತರಾಗುತ್ತಾರೆ. ಎಲ್ಲರೆದುರು ಬಯ್ದಾಗ ಅವರು ಮೂಲೆ ಸೇರಿ ಅಳಲು ಆರಂಭಿಸುತ್ತಾರೆ ಇಲ್ಲವೇ ಮುಖ ಊದಿಸಿಕೊಂಡು ಕೂತು ಬಿಡುತ್ತಾರೆ. ತಪ್ಪು ಮಾಡಿದಾಗ ಮಕ್ಕಳಿಗೆ ಕೇವಲ ಬಯ್ಯುವುದರಿಂದ ಇವರೇನೋ ಕೂಗುತ್ತಿದ್ದಾರೆ ಎಂಬ ಭೀತಿ ಕಾಡುತ್ತದೆಯೇ ಹೊರತು ನೀವು ಹೇಳುವ ಮಾತುಗಳು ಅರ್ಥವಾಗುವುದಿಲ್ಲ.
ತಪ್ಪು ಮಾಡಿದಾಗ ಮಕ್ಕಳಿಗೆ ತಿಳಿಹೇಳಿ. ಬುದ್ಧಿ ಮಾತು ಕೇಳುವ ವಯಸ್ಸು ಅದಲ್ಲದಿದ್ದರೂ ನೀತಿ ಕತೆಯ ಮೂಲಕ ಅವರು ಮಾಡಿದ ತಪ್ಪನ್ನು ಅವರಿಗೆ ವಿವರಿಸಿ ಹೇಳಿದರೆ ಎಲ್ಲಾ ಮಕ್ಕಳೂ ತಪ್ಪನ್ನು ತಿದ್ದಿಕೊಳ್ಳುತ್ತಾರೆ ಅಥವಾ ಮತ್ತೆ ಅದೇ ತಪ್ಪನ್ನು ಮಾಡುವುದಿಲ್ಲ.