ಸಮೋಸವೆಂದರೆ ಬಾಯಲ್ಲಿ ನೀರು ಬರುತ್ತದೆ. ಬಿಸಿಬಿಸಿಯಾದ ಸಮೋಸ ಜೊತೆಗೆ ಒಂದು ಕಪ್ ಟೀ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಸಮೋಸ ಮಾಡುವುದು ಕಷ್ಟ ಎನ್ನುವವರು ಕೂಡ ಮಾಡಬಹುದು ಈ ಸಮೋಸವನ್ನು. ಒಮ್ಮೆ ಟ್ರೈ ಮಾಡಿ.
3 ಹದ ಗಾತ್ರದ ಈರುಳ್ಳಿ ತೆಗೆದುಕೊಂಡು ಉದ್ದಕ್ಕೆ ಸೀಳಿಕೊಳ್ಳಿ. ಇದನ್ನು ಒಂದು ಬೌಲ್ ಗೆ ಹಾಕಿಕೊಂಡು ಕೈಯಿಂದ ಚೆನ್ನಾಗಿ ಕಿವುಚಿ. ನಂತರ ಇದಕ್ಕೆ 2 ಹಸಿಮೆಣಸನ್ನು ಕತ್ತರಿಸಿಕೊಂಡು ಹಾಕಿ 1 ಚಮಚ ಖಾರದ ಪುಡಿ, 1 ಚಮಚ ಧನಿಯಾ ಪುಡಿ, ½ ಚಮಚ ಗರಂ ಮಸಾಲ, ¼ ಟೀ ಸ್ಪೂನ್ ಚಾಟ್ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿಸೊಪ್ಪು ಕತ್ತರಿಸಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಒಂದು ಬೌಲ್ ಗೆ 2 ಕಪ್ ಮೈದಾ, 2 ಟೇಬಲ್ ಸ್ಪೂನ್ ಗೋಧಿ ಹಿಟ್ಟು, ¼ ಟೀ ಸ್ಪೂನ್ ಉಪ್ಪು ಹಾಗೇ 2 ಟೇಬಲ್ ಸ್ಪೂನ್ ಕಾಯಿಸಿದ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಳ್ಳಿ. ಇದು ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ನಾದಿಕೊಂಡ ಹಿಟ್ಟಿನಿಂದ ಹದ ಗಾತ್ರದ ಉಂಡೆ ಮಾಡಿಕೊಂಡು ತೆಳುವಾಗಿ ಲಟ್ಟಿಸಿಕೊಳ್ಳಿ.
ಲಟ್ಟಿಸಿಕೊಂಡ ಚಪಾತಿಯನ್ನು ಒಂದು ಕಾವಲಿ ಮೇಲೆ ಹಾಕಿ ಎರಡು ಕಡೆ ಸ್ವಲ್ಪ ಬಿಸಿ ಮಾಡಿಕೊಂಡು ಒಂದು ಪ್ಲೇಟ್ ತೆಗೆದಿಟ್ಟುಕೊಳ್ಳಿ. ನಂತರ ಒಂದು ಚಾಕುವಿನ ಸಹಾಯದಿಂದ ಈ ಚಪಾತಿಗಳನ್ನು ಸ್ವಲ್ಪ ಅಗಲ ಶೇಪ್ ನಲ್ಲಿ ಉದ್ದಕ್ಕೆ ಕತ್ತರಿಸಿಕೊಳ್ಳಿ.
ಕತ್ತರಿಸಿಕೊಂಡ ಚಪಾತಿಯನ್ನು ಸಮೋಸ ಆಕಾರದಲ್ಲಿ ಮಡಚಿ ಅದರ ಒಳಗೆ ಈರುಳ್ಳಿ ಮಿಶ್ರಣ ತುಂಬಿ. ನಂತರ 2 ಚಮಚ ಮೈದಾ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿಕೊಂಡು ಅಂಟಿನ ರೀತಿ ಮಾಡಿಕೊಳ್ಳಿ. ಈ ಮೈದಾ ಮಿಶ್ರಣವನ್ನು ಅಂಟಿನಂತೆ ಸಮೋಸದ ತುದಿಗಳಿಗೆ ಹಚ್ಚಿ ಕಾದ ಎಣ್ಣೆಯಲ್ಲಿ ಕರಿದರೆ ಗರಿ ಗರಿಯಾದ ಸಮೋಸ ಸವಿಯಲು ಸಿದ್ಧ.