ಒಂದೆಡೆ ಪ್ರಕೃತಿಯ ಸುಂದರ ವಾತಾವರಣ. ಇನ್ನೊಂದೆಡೆ ಕಲೆ, ಸಂಸ್ಕೃತಿಗಳಿಂದ ಸಮೃದ್ಧವಾದ ಮಾಂಟ್ರಿಯಲ್ ಗೆ ಪ್ರವಾಸಿಗರನ್ನು ಮೋಡಿ ಮಾಡುವ ಮಾಂತ್ರಿಕ ಶಕ್ತಿ ಇದೆ. ಕೆನಡಾದ ಮಾಂಟ್ರಿಯಲ್ ಪ್ರಾಕೃತಿಕ ತಾಣಗಳಿಂದ ಕೂಡಿದ್ದು, ಚಾರಣಿಗರನ್ನು ಯಥೇಚ್ಛವಾಗಿ ಸೆಳೆಯುತ್ತಿದೆ.
ಕೆನಡಾದ ಹಳೆಯ ವಸಾಹತುಗಳಲ್ಲಿ ಒಂದಾದ ದ್ವೀಪನಗರಿ ಮಾಂಟ್ರಿಯಲ್ ಹಲವು ವೈಶಿಷ್ಟ್ಯತೆಗಳೊಂದಿಗೆ ಪ್ರವಾಸಿಗರನ್ನು ವ್ಯಾಪಕವಾಗಿ ಸೆಳೆಯುತ್ತಿದೆ. ಇದು ಐತಿಹಾಸಿಕ ತಾಣವಾಗಿಯೂ ಖ್ಯಾತಿ ಹೊಂದಿದೆ. ಮೌಂಟ್ ರಿಯಲ್ ಎಂಬ ಬೆಟ್ಟದ ಸುತ್ತ ಹರಡಿರುವುದರಿಂದ ಈ ನಗರಕ್ಕೆ ಮಾಂಟ್ರಿಯಲ್ ಎಂಬ ಹೆಸರು ಬಂದಿದೆ.
ಯುರೋಪಿಯನ್ನರು ಬರುವ ಮುಂಚೆ ರೆಡ್ ಇಂಡಿಯನ್ ಜನಾಂಗ ಇಲ್ಲಿ ವಾಸವಿತ್ತು. 17ನೇ ಶತಮಾನದಲ್ಲಿ ಫ್ರೆಂಚರು ಈ ಸ್ಥಳವನ್ನು ಆಕ್ರಮಿಸಿದರು. ನಂತರ ಬ್ರಿಟಿಷರು ವಶಪಡಿಸಿಕೊಂಡರು. ಈಗ ಇದು ಕೆನಡಾದ ಪ್ರಮುಖ ನಗರಗಳಲ್ಲಿ ಒಂದು.
ಮಾಂಟ್ರಿಯಲ್ ನಗರ ಹಳೆಯ ಹಾಗೂ ಹೊಸ ನಗರಗಳ ಸಮ್ಮಿಶ್ರಣ. ನಗರದ ಹಳೆಯ ಭಾಗದಲ್ಲಿ 17ನೇ ಶತಮಾನದ ಮನೆಗಳು, ಭವನಗಳವೆ. ಅಲ್ಲಿನ ರಸ್ತೆಗಳಲ್ಲಿ ಹಳೆಯ ಕಾಲದ ವಿಕ್ಟೋರಿಯಾ ಕುದುರೆ ಗಾಡಿಗಳನ್ನು ಕಾಣಬಹುದು. ಹಾಗೇ ಹಳೆಯ ಕಾಲದ ಜಾನಪದ ಕಲಾ ವಸ್ತುಗಳು, ಪೇಂಟಿಂಗ್ ಗಳು ಲಭ್ಯ.
ಇಲ್ಲಿ ನೋಡಲೇಬೇಕಾದ ಪ್ರೇಕ್ಷಣೀಯ ಸ್ಥಳಗಳೆಂದರೆ ಗೋಥೀಕ್ ಶೈಲಿಯಲ್ಲಿ ಕಟ್ಟಿರುವ ನೋಟ್ರೆ ಡೇಮ್ ಬೆಸಿಲಿಕಾ, ಮಾಂಟ್ರಿಯಲ್ ಟವರ್ ಅಬ್ಸರ್ ವೇಟರಿ, ಬಯೋಡೋಮ್ ಎಂಬ ಜಲಚರಗಳು ಮತ್ತು ಪಕ್ಷಿಗಳ ಪ್ರಕೃತಿ ಸಹಜ ತಂಗುದಾಣ, ಹಳೆಯ ಬಂದರು, ಚೈನೀಸ್ ಬೊಟಾನಿಕಲ್ ಉದ್ಯಾನ ಮುಂತಾದವುಗಳು.
ಮಾಂಟ್ರಿಯಲ್ ಗಿರಿ ಅತ್ಯಂತ ಸುಂದರ. ಬೆಟ್ಟವನ್ನೇರುವಾಗ ಕಾಣುವ ಸುಂದರ ಮನೆಗಳು, ಚಾರಣ ದಾರಿಗಳು, ಸ್ಕೀಯಿಂಗ್ ಹಾಗೂ ಸ್ಕೇಟಿಂಗ್ ತಾಣಗಳು ವೀಕ್ಷಣೀಯ. ಬೆಟ್ಟದ ಮೇಲಿರುವ ವೀಕ್ಷಣಾ ತಾಣದಿಂದ ಕಾಣುವ ನಗರದ ವಿಹಂಗಮ ನೋಟ ಅತ್ಯಂತ ಸುಂದರ.
ಶಿಲ್ಪಕಲೆಗಳಿಂದ ಕೂಡಿದ ನಗರದ ಮ್ಯೂಸಿಯಂಗಳು, ಕಲಾ ಕೇಂದ್ರಗಳು, ಅನೇಕ ಭಾರತೀಯ ಉಪಹಾರ ಮಂದಿರಗಳಿವೆ. ಇಲ್ಲಿನ ವಸ್ತ್ರ ಮಳಿಗೆಗಳಲ್ಲಿ ಕೈಗೆಟಕುವ ಬೆಲೆಗಳಲ್ಲಿ ಸುಂದರ ಉಡುಪುಗಳು ದೊರೆಯುತ್ತವೆ.