ಬೆಳಗ್ಗೆ ಎದ್ದ ತಕ್ಷಣ ಸುದ್ದಿ ಓದಲು, ಬ್ಯಾಂಕಿಂಗ್ ವ್ಯವಹಾರ ನಡೆಸಲು, ಆನ್ಲೈನ್ ಶಾಪಿಂಗ್ ಮಾಡಲು ಅಥವಾ ಕಚೇರಿ ಕೆಲಸಕ್ಕೆ ಕಂಪ್ಯೂಟರ್ ಆನ್ ಮಾಡಿದಾಗ ಬಹುತೇಕರು ಮೊದಲು ತೆರೆಯುವುದು ಗೂಗಲ್ ಕ್ರೋಮ್ (Google Chrome) ಬ್ರೌಸರ್. ಆದರೆ ನೀವು ಪ್ರತಿದಿನ ಬಳಸುವ ಇದೇ ಬ್ರೌಸರ್ನಲ್ಲಿ ಗಂಭೀರ ಭದ್ರತಾ ದೋಷಗಳು ಪತ್ತೆಯಾಗಿವೆ. ಹೀಗಾಗಿ ಕ್ರೋಮ್ ಬಳಕೆದಾರರು ತಕ್ಷಣ ಎಚ್ಚೆತ್ತುಕೊಳ್ಳುವಂತೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಎಚ್ಚರಿಕೆ ನೀಡಿದೆ.
ಆತಂಕಕಾರಿ ಸಂಗತಿಯೆಂದರೆ, ಪತ್ತೆಯಾಗಿರುವ ಭದ್ರತಾ ದೋಷಗಳ ಪೈಕಿ ಒಂದು ದೋಷವನ್ನು ಸೈಬರ್ ದಾಳಿಕೋರರು ಈಗಾಗಲೇ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಬಳಕೆದಾರರ ವೈಯಕ್ತಿಕ ಮಾಹಿತಿ, ಪಾಸ್ವರ್ಡ್ಗಳು ಹಾಗೂ ಕಂಪ್ಯೂಟರ್ನಲ್ಲಿರುವ ಪ್ರಮುಖ ಡೇಟಾಗಳಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ.
ಯಾವ ಕ್ರೋಮ್ ಬಳಕೆದಾರರಿಗೆ ಅಪಾಯ?
CERT-In ನೀಡಿರುವ ಎಚ್ಚರಿಕೆಯ ಪ್ರಕಾರ, ಗೂಗಲ್ ಕ್ರೋಮ್ನ ಕೆಲವು ಹಳೆಯ ಆವೃತ್ತಿಗಳಲ್ಲಿ ಹಲವು ಭದ್ರತಾ ದೋಷಗಳು ಕಂಡುಬಂದಿವೆ.
-
Google Chrome: 157.0.8103.50 ಆವೃತ್ತಿಗಿಂತ ಹಿಂದಿನ ಆವೃತ್ತಿಗಳು.
-
Extended Stable: 156.0.807 ಆವೃತ್ತಿಗಿಂತ ಹಿಂದಿನ ಆವೃತ್ತಿಗಳು.
ಹಳೆಯ ಆವೃತ್ತಿಗಳನ್ನು ಬಳಸುತ್ತಿರುವವರು ತಕ್ಷಣವೇ ಹೊಸ ಭದ್ರತಾ ಅಪ್ಡೇಟ್ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ನಿಮ್ಮ Chrome ಸುರಕ್ಷಿತವಾಗಿದೆಯೇ? ಹೀಗೆ ಚೆಕ್ ಮಾಡಿ
ಬ್ರೌಸರ್ ಅಪ್ಡೇಟ್ ಮಾಡಲು ಹೆಚ್ಚು ಸಮಯ ಬೇಕಾಗಿಲ್ಲ. ಕೆಲವೇ ನಿಮಿಷಗಳಲ್ಲಿ ಈ ಕೆಲಸ ಪೂರ್ಣಗೊಳಿಸಬಹುದು.
-
ಮೊದಲು ನಿಮ್ಮ ಕಂಪ್ಯೂಟರ್ನಲ್ಲಿ Google Chrome ತೆರೆಯಿರಿ.
-
ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ (⋮) ಮೇಲೆ ಕ್ಲಿಕ್ ಮಾಡಿ.
-
ಅಲ್ಲಿ Settings ಆಯ್ಕೆ ಮಾಡಿ.
-
ನಂತರ About Chrome ವಿಭಾಗಕ್ಕೆ ಹೋಗಿ.
-
ಹೊಸ ಅಪ್ಡೇಟ್ ಲಭ್ಯವಿದ್ದರೆ ಅದು ಸ್ವಯಂಚಾಲಿತವಾಗಿ ಡೌನ್ಲೋಡ್ ಆಗುತ್ತದೆ.
-
ಅಪ್ಡೇಟ್ ಪೂರ್ಣಗೊಂಡ ಬಳಿಕ Relaunch ಮೇಲೆ ಕ್ಲಿಕ್ ಮಾಡಿ.
ಇಷ್ಟು ಮಾಡಿದರೆ ನಿಮ್ಮ ಬ್ರೌಸರ್ ಹೊಸ ಆವೃತ್ತಿಗೆ ಅಪ್ಡೇಟ್ ಆಗುತ್ತದೆ.
ಈ ಎಚ್ಚರಿಕೆಯನ್ನು ನಿರ್ಲಕ್ಷಿಸಬೇಡಿ!
ಇಂದಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರಗಳಿಂದ ಹಿಡಿದು ವೈಯಕ್ತಿಕ ಇಮೇಲ್ಗಳು, ಸಾಮಾಜಿಕ ಜಾಲತಾಣಗಳ ಖಾತೆಗಳು ಹಾಗೂ ಕಚೇರಿಯ ಪ್ರಮುಖ ದಾಖಲೆಗಳವರೆಗೆ ಹಲವು ಮಾಹಿತಿಗಳು ಬ್ರೌಸರ್ ಮೂಲಕವೇ ಬಳಕೆಯಾಗುತ್ತವೆ. ಹೀಗಾಗಿ ಸಣ್ಣ ಭದ್ರತಾ ಲೋಪವೂ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು.
ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡುವುದು, ಅನುಮಾನಾಸ್ಪದ ವೆಬ್ಸೈಟ್ಗಳನ್ನು ತೆರೆಯುವುದು ಮತ್ತು ಅನಧಿಕೃತ ಸಾಫ್ಟ್ವೇರ್ಗಳನ್ನು ಡೌನ್ಲೋಡ್ ಮಾಡುವುದನ್ನು ತಪ್ಪಿಸಿ. ನಿಮ್ಮ Google Chrome ಬ್ರೌಸರ್ ಅನ್ನು ಸದಾ ಇತ್ತೀಚಿನ ಆವೃತ್ತಿಯಲ್ಲಿ ಇಟ್ಟುಕೊಳ್ಳಿ.

