ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಇದ್ದರೂ ವ್ಯಕ್ತಿಯೊಬ್ಬ ಎರಡು ಮಕ್ಕಳ ತಾಯಿ ಹಿಂದೆ ಬಿದ್ದು, ಪತ್ನಿಗೆ ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪತ್ನಿ ಇದ್ದರೂ ಗುಟ್ಟಾಗಿ ಎರಡು ಮಕ್ಕಳ ತಾಯಿಯನ್ನು ಮತ್ತೊಂದು ವಿವಾಹವಾಗಿ ಪತ್ನಿಗೆ ಮೋಸ ಮಾಡಿದ್ದಾನೆ ಪಾಪಿ ಪತಿ. ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅನಾಥೆಯಾಗಿದ್ದ ಹಿಂದೂ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ ಮೊಹಮ್ಮದ್ ಸದಾಕತ್ ಅಲಿ ಎಂಬಾತ, ಈಗ ಗುಟ್ಟಾಗಿ ಮತ್ತೊಂದು ಮದುವೆಯಾಗಿ ವಂಚಿಸಿದ್ದಾನೆ ಎಂದು ಪತ್ನಿ ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದಾರೆ.
ಸಂತ್ರಸ್ತೆಗೆ ತಂದೆ-ತಾಯಿ ಯಾರೂ ಇರಲಿಲ್ಲ. ಸುಮಾರು 10 ವರ್ಷಗಳ ಹಿಂದೆ ಕಾವಲಭೈರಸಂದ್ರದ ಸ್ನೇಹಿತರ ಮನೆಗೆ ಹೋಗಿದ್ದಾಗ ಆಕೆಗೆ ಮೊಹಮ್ಮದ್ ಸದಾಕತ್ ಅಲಿಯ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿ, ಇಬ್ಬರೂ ಬರೋಬ್ಬರಿ 10 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದರು. ಬಳಿಕ ಕಳೆದ 5 ವರ್ಷಗಳ ಹಿಂದೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬದ್ಧವಾಗಿ ಮದುವೆಯಾಗಿದ್ದರು.
ಈ ಮದುವೆಗೆ ಗೆಳೆಯ ಅನಿಲ್ ಕುಮಾರ್ ಹಾಗೂ ಅವರ ಪತ್ನಿ ಸಾಕ್ಷಿಯಾಗಿ ಸಹಿ ಹಾಕಿದ್ದರು. ಮದುವೆಯ ವಿಚಾರವನ್ನು ಮೊಹಮ್ಮದ್ ತನ್ನ ಕುಟುಂಬಕ್ಕೆ ತಿಳಿಸಿರಲಿಲ್ಲ. ಆದರೆ, ಇಬ್ಬರೂ ಕಲ್ಯಾಣನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು.
ಕಳೆದ ಒಂದು ತಿಂಗಳಿನಿಂದ ಮೊಹಮ್ಮದ್ ಮನೆಗೆ ಸರಿಯಾಗಿ ಬರುವುದನ್ನೇ ನಿಲ್ಲಿಸಿದ್ದ. ಇದರಿಂದ ಅನುಮಾನಗೊಂಡ ಪತ್ನಿ, ಯಾಕೆ ಮನೆಗೆ ಬರುತ್ತಿಲ್ಲ ಎಂದು ಗಂಡನನ್ನು ಪ್ರಶ್ನಿಸಿ ಜಗಳ ಮಾಡಿದ್ದಳು. ಆಗ ಅಸಲಿ ಸತ್ಯ ಬಾಯಿಬಿಟ್ಟ ಮೊಹಮ್ಮದ್, ತಾನು ಈಗಾಗಲೇ ಇಬ್ಬರು ಮಕ್ಕಳಿರುವ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿರುವುದಾಗಿ ಹೇಳಿದ್ದ
ಒಂದು ತಿಂಗಳ ಹಿಂದೆ ಈತ ಎರಡನೇ ಮದುವೆಯಾಗಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆ ಮೊದಲು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಸರಿಯಾಗಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಇದೀಗ ನ್ಯಾಯಕ್ಕಾಗಿ ನಗರ ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದಾಳೆ.

