ಬೆಂಗಳೂರು ನಗರ ಜಿಲ್ಲೆ : ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಂಪ್ಯೂಟರ್ ಆಪರೇಟರ್, ಲೆದರ್ ವರ್ಕರ್/ಶೂ ಮೇಕರ್, ಸ್ಪೀಚ್ ಥೆರಪಿಸ್ಟ್ ಮತ್ತು ಆಡಿಯಾಲಜಿಸ್ಟ್, ಮೊಬಿಲಿಟಿ ಇನ್ಸ್ಟ್ರಕ್ಟರ್, ಇಯರ್ ಮೋಲ್ಡ್ ಟೆಕ್ನಿಷಿಯನ್, ಕೀಲು ಮತ್ತು ಮೂಳೆ ತಜ್ಞರು, ನೇತ್ರ ತಜ್ಞರು, ಇಎನ್ಟಿ ತಜ್ಞರು, ಮನೋವೈದ್ಯರು, ಕೃತಕಾಂಗ ಜೋಡಣೆ ಅಭಿಯಂತರರು ಹಾಗೂ ಕಚೇರಿ ಸೇವಕರು ಸೇರಿದಂತೆ ಒಟ್ಟು 11 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
.ಅರ್ಹ ಅಭ್ಯರ್ಥಿಗಳು ತಮ್ಮ ಸ್ವವಿವರ, ಮೊಬೈಲ್ ಸಂಖ್ಯೆ ಹಾಗೂ ಅಗತ್ಯ ದಾಖಲೆಗಳೊಂದಿಗೆ ಅಧ್ಯಕ್ಷರು/ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ಕೆ.ಎಲ್.ಇ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆವರಣ, ಗೊರಗುಂಟೆಪಾಳ್ಯ, ಬೆಂಗಳೂರು-560022 ವಿಳಾಸಕ್ಕೆ ನೇರವಾಗಿ ಅಥವಾ ಅಂಚೆ ಮೂಲಕ ನವೆಂಬರ್ 20 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8431308600, 9164496483 ಸಂಪರ್ಕಿಸಬಹುದು. ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆ ತಿಳಿಸಿದೆ.
ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಕಾನೂನು ನೆರವು ಪಡೆಯುವ ಹಕ್ಕಿದೆ: ರವೀಂದ್ರ ಹೆಗಡೆ
ಬೆಂಗಳೂರು : ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರು ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅಗತ್ಯವಾದ ಕಾನೂನು ನೆರವು, ಪರಿಹಾರ ಸೌಲಭ್ಯಗಳನ್ನು ಒದಗಿಸುವುದು ಅತ್ಯಂತ ಮುಖ್ಯವಾಗಿದೆ. ಸಂತ್ರಸ್ತರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿ, ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರವೀಂದ್ರ ಹೆಗಡೆ ತಿಳಿಸಿದರು.
ನಗರ ಸಿವಿಲ್ ಮತ್ತು ಮತ್ತು ಸತ್ರ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇತರ ಭಾಗಿದಾರ ಇಲಾಖೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ. ಆಸಿಡ್ ದಾಳಿ ಸಂದರ್ಭದಲ್ಲಿ ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮತ್ತು ಆಸಿಡ್ ದಾಳಿ ಸಂತ್ರಸ್ತರ ಹಕ್ಕುಗಳು ಮತ್ತು ಪರಿಹಾರ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆ್ಯಸಿಡ್ ದಾಳಿಯು ಸಂತ್ರಸ್ತರ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ, ಅವರ ಮಾನಸಿಕ ಸ್ಥಿತಿ, ಸಾಮಾಜಿಕ ಜೀವನ ಹಾಗೂ ಭವಿಷ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಂತ್ರಸ್ತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಪರಿಹಾರ ಸೌಲಭ್ಯಗಳು ದೊರೆಯುವಂತೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸಂತ್ರಸ್ತರು ನ್ಯಾಯ ಪಡೆಯಲು ಯಾವುದೇ ರೀತಿಯ ಅಡೆತಡೆ ಎದುರಿಸದಂತೆ ಕಾನೂನು ಸೇವೆಗಳ ಪ್ರಾಧಿಕಾರ ಅಗತ್ಯ ಸಹಕಾರ ನೀಡಲಿದೆ ಎಂಬ ತಿಳಿಸಿದರು.
ಆ್ಯಸಿಡ್ ದಾಳಿಗೆ ಒಳಗಾದವರು ತಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ಸಲಹೆ ಪಡೆಯಲು, ನ್ಯಾಯಾಲಯದ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ನಿಯಮಾನುಸಾರ ದೊರೆಯುವ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಸಂತ್ರಸ್ತರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗಣಪತಿ ಪ್ರಶಾಂತ್. ಎಂ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಶೈಲ ಭೀಮ ಸೇನ ಬಗಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಸುಮಂಗಲ ಮಾಳಾಪುರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಆಸಿಡ್ ದಾಳಿಯ ಸಂತ್ರಸ್ತರು ಉಪಸ್ಥಿತರಿದ್ದರು

