ಅಂಕಾರ: ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 17 ಜನರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಶ್ಚಿಮ ಟರ್ಕಿಯ ಇಜ್ಮಿರ್ ಪ್ರಾಂತ್ಯದ ‘ಹಬಾಶ್’ ಉಕ್ಕು ಕಾರ್ಖಾನೆಯಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಸ್ಫೋಟದಲ್ಲಿ 17 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಜ್ಮಿರ್ ಬಂದರು ನಗರದ ಉತ್ತರಕ್ಕೆ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಅಲಿಯಾಗಾ ಜಿಲ್ಲೆಯ ಹಬಾಶ್ ಕಬ್ಬಿಣ ಮತ್ತು ಉಕ್ಕು ತಯಾರಿಕಾ ಘಟಕದಲ್ಲಿ ಈ ಭೀಕರ ಅವಘಡ ನಡೆದಿದೆ. ಆರಂಭದಲ್ಲಿ 16 ಮಂದಿ ಮೃತಪಟ್ಟಿರುವುದಾಗಿ ಪ್ರಕಟಿಸಲಾಗಿತ್ತಾದರೂ, ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಕಾರ್ಮಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರಿಂದ ಮೃತರ ಸಂಖ್ಯೆ 17ಕ್ಕೇರಿದೆ.
ದ್ರವ ಉಕ್ಕು ಎರಕಹೊಯ್ಯುವ ವೇಳೆ ಬಾಯ್ಲರ್ ಬದಲಾಯಿಸುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಬೃಹತ್ ಕ್ರೇನ್ ಕುಸಿದು ಪ್ರಮುಖ ಕೈಗಾರಿಕಾ ಕುಲುಮೆಗೆ ಬಿದ್ದಿದೆ. ಪ್ರತ್ಯಕ್ಷದರ್ಶಿ ಕಾರ್ಮಿಕ ಯಾಸಿನ್ ಸೆಟಿನರ್ ಪ್ರಕಾರ, ಕ್ರೇನ್‌ನ ಹಗ್ಗ ತುಂಡಾದ ಪರಿಣಾಮ ಸುಮಾರು 120 ಟನ್‌ಗಳಷ್ಟು ಕುದಿಯುವ ದ್ರವ ಉಕ್ಕು ಕುಲುಮೆಯ ಮೇಲೆ ಬಿದ್ದಿದೆ. ಕುಲುಮೆಯೊಳಗಿದ್ದ ವಾಟರ್-ಕೂಲ್ಡ್ ಪ್ಯಾನೆಲ್‌ಗಳ ನೀರು ಮತ್ತು ಕಾದ ದ್ರವ ಉಕ್ಕು ಒಂದಕ್ಕೊಂದು ಸ್ಪರ್ಶಿಸಿ ಭಾರಿ ಪ್ರಮಾಣದ ‘ಹೈಡ್ರೋಜನ್ ಸ್ಫೋಟ’ ಉಂಟಾಗಿದೆ.
’ಸ್ಫೋಟದ ತೀವ್ರತೆಗೆ ಇಡೀ ಪ್ರದೇಶದಲ್ಲಿ ಭೂಕಂಪನದ ಅನುಭವವಾಯಿತು. ಕಾರ್ಖಾನೆಯ ಮೇಲ್ಛಾವಣಿಯು ಕರಗಿ ನೀರು ಹರಿದಂತೆ ಉರಿಯುತ್ತಿತ್ತು. ಅಕ್ಷರಶಃ ಪ್ರಳಯದಂತೆ ಕಾಣಿಸುತ್ತಿತ್ತು” ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಡೆನಿಜ್ ಉಲ್ಕರ್ ತಿಳಿಸಿದ್ದಾರೆ.
ಕಾರ್ಖಾನೆಯ ಭದ್ರತಾ ಲೋಪದ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಸಹೋದರನನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಕಾರ್ಖಾನೆಯ ಹೊರಗೆ ಸಾರ್ವಜನಿಕವಾಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಪ್ರತಿಭಟನೆ ನಡೆಸಿದ್ದು, ತಕ್ಷಣ ಸಾರ್ವಜನಿಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರ್ಮಿಕರ ಭದ್ರತಾ ಲೋಪವನ್ನು ಖಂಡಿಸಿ ಹೇಳಿಕೆ ನೀಡಲು ಯತ್ನಿಸಿದ ಇಜಿಯನ್ ವರ್ಕರ್ಸ್ ಕಲೆಕ್ಟಿವ್‌ನ ಇಬ್ಬರು ಪ್ರತಿನಿಧಿಗಳನ್ನು ಪೊಲೀಸರು ಆಸ್ಪತ್ರೆ ಮುಂದೆ ಬಂಧಿಸಿದ್ದಾರೆ. “ಹಬಾಶ್ ಆಡಳಿತ ಮಂಡಳಿಯ ಲಾಭದ ದುರಾಶೆಯೇ ಈ ಮಹಾದುರಂತಕ್ಕೆ ಕಾರಣ” ಎಂದು ಸಂಘಟನೆಯ ವಕ್ತಾರ ಒಕ್ಟಾಯ್ ಟರ್ಕ್ ಆರೋಪಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ಈ ಕಾರ್ಖಾನೆಯಲ್ಲಿ 11 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಳೆದ 3 ವಾರಗಳಲ್ಲಿ ನಡೆದ 3ನೇ ದುರಂತ ಇದಾಗಿದೆ.

