HomeKarnatakaಸಾರ್ವಜನಿಕ ಉದ್ಯಾನವನ ಇನ್ನು ಮುಂದೆ ಸಾರ್ವಜನಿಕರಿಗಾಗಿ ಇಲ್ಲವೇ?

ಸಾರ್ವಜನಿಕ ಉದ್ಯಾನವನ ಇನ್ನು ಮುಂದೆ ಸಾರ್ವಜನಿಕರಿಗಾಗಿ ಇಲ್ಲವೇ?

ಬೆಂಗಳೂರು: ಬೆಂಗಳೂರಿನಲ್ಲಿ ಸಾರ್ವಜನಿಕ ಉದ್ಯಾನವನ ಸಾರ್ವಜನಿಕರಿಗೆ ಇಲ್ಲವೇ? ಎಂಬ ಪ್ರಶ್ನೆ ಮೂಡಿದೆ. ಕಾರಣ ವಾಣಿಜ್ಯ ಚಟುವಟಿಕೆಗಳಿಗೆ ಬಾಡಿಗೆ ನೀಡುತ್ತಿರುವುದಕ್ಕೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈಟ್‌ಫೀಲ್ಡ್‌ನ ಇನ್ನರ್ ಸರ್ಕಲ್ ಉದ್ಯಾನವನ ಮತ್ತು ಆಟದ ಮೈದಾನವನ್ನು ವಾಣಿಜ್ಯ ಚಟುವಟಿಕೆಗಳಿಗೆ ಪದೇಪದೇ ಬಾಡಿಗೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸಾರ್ವಜನಿಕರಿಗೆ ಉದ್ಯಾನವನದ ಬಳಕೆಗೆ ಅವಕಾಶ ಇಲ್ಲದಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈಟ್‌ಫೀಲ್ಡ್‌ನ ಇನ್ನರ್ ಸರ್ಕಲ್ ರಸ್ತೆಯಲ್ಲಿರುವ ಉದ್ಯಾನವನ ಮತ್ತು ಆಟದ ಮೈದಾನವನ್ನು ಶಾಲಾ ಕಾರ್ಯಕ್ರಮಗಳು, ವಾಣಿಜ್ಯ ಕಾರ್ಯಕ್ರಮಗಳು ಹಾಗೂ ಜಾತ್ರೆಗಳಿಗೆ ಬಹುತೇಕ ಪ್ರತಿ ತಿಂಗಳು ಬಾಡಿಗೆ ನೀಡಲಾಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ. ಕಾರ್ಯಕ್ರಮಗಳಿಗಾಗಿ ಮೈದಾನದಲ್ಲಿ ಮಳಿಗೆಗಳು ಹಾಗೂ ಜಾತ್ರೆಯ ಆಟಿಕೆಗಳನ್ನು ಅಳವಡಿಸುವುದು ಮತ್ತು ತೆರವುಗೊಳಿಸುವುದಕ್ಕೆ ಹಲವು ದಿನಗಳು ಬೇಕಾಗುತ್ತಿವೆ. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಮೈದಾನದ ಪ್ರವೇಶ ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಪರಾಧ ಚಟುವಟಿಕೆಗಳ ಆತಂಕ:

ಕಾರ್ಯಕ್ರಮಗಳ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗುವುದರ ಜತೆಗೆ ಅಪರಾಧ ಚಟುವಟಿಕೆಗಳು, ಬಹಿರಂಗವಾಗಿ ಮಾದಕ ವಸ್ತುಗಳ ಬಳಕೆ ಹಾಗೂ ಮಹಿಳೆಯರು ಮತ್ತು ಮಕ್ಕಳಿಗೆ ಕಿರುಕುಳ ನೀಡಿದ ಘಟನೆಗಳು ನಡೆದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಉದ್ಯಾನವನಕ್ಕೆ ಬರುವವರ ಸುರಕ್ಷತೆಯ ಬಗ್ಗೆಯೂ ಆತಂಕ ಉಂಟಾಗಿದೆ.

ದಶಕಗಳಿಂದ ಈ ಮೈದಾನವನ್ನು ಮಕ್ಕಳು, ಕ್ರಿಕೆಟ್, ಫುಟ್‌ಬಾಲ್ ಮತ್ತು ವಾಲಿಬಾಲ್ ಆಟಗಾರರು ಬಳಸುತ್ತಿದ್ದಾರೆ. ಆದರೆ ಇತ್ತೀಚೆಗೆ ವಾಣಿಜ್ಯ ಚಟುವಟಿಕೆಗಳಿಗಾಗಿ ಮೈದಾನವನ್ನು ದೀರ್ಘಕಾಲ ಬಳಸಿಕೊಳ್ಳುತ್ತಿರುವುದರಿಂದ ಸ್ಥಳೀಯರಿಗೆ ಆಟವಾಡಲು ಅವಕಾಶ ಸಿಗುತ್ತಿಲ್ಲ ಎಂದು ಡಾಡ್ಸ್‌ವರ್ತ್ ಎನ್‌ಕ್ಲೇವ್ ನಿವಾಸಿ ಅಲಿ ಗಿಲಾನಿ ಹೇಳಿದ್ದಾರೆ.

200 ನಿವಾಸಿಗಳಿಂದ ಮನವಿ:

ಈ ಕುರಿತು ನಿವಾಸಿಗಳು ಡಿಸಿಪಿ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ, ಸುಮಾರು 200 ನಿವಾಸಿಗಳ ಸಹಿ ಹೊಂದಿರುವ ಮನವಿಯನ್ನು ಆಯುಕ್ತರಿಗೂ ಸಲ್ಲಿಸಿದ್ದಾರೆ. ಆಟದ ಮೈದಾನವನ್ನು ವಾಣಿಜ್ಯ ಉದ್ದೇಶಗಳಿಗೆ ಬಾಡಿಗೆ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ನವೆಂಬರ್‌ನಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಿರುವ ಕುರಿತು ಸಾಕ್ಷ್ಯಾಧಾರಗಳೊಂದಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇನ್ನರ್ ಸರ್ಕಲ್ ನಿವಾಸಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆಗ್ರಹ:

ವೈಟ್‌ಫೀಲ್ಡ್‌ನಲ್ಲಿ ಯೋಜಿತ ಬೆಳವಣಿಗೆಯ ಕೊರತೆಯಿಂದಾಗಿ ಮಕ್ಕಳಿಗೆ ಆಟವಾಡಲು ಲಭ್ಯವಿರುವ ಕೆಲವೇ ಮೈದಾನಗಳಲ್ಲಿ ಇದು ಪ್ರಮುಖವಾಗಿದೆ. ಇಂತಹ ಸಾರ್ವಜನಿಕ ಸ್ಥಳಗಳನ್ನು ಜನರ ಮನರಂಜನೆ, ಕ್ರೀಡೆ ಹಾಗೂ ವಾಯುವಿಹಾರಕ್ಕೆ ಮೀಸಲಿಡಬೇಕು. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮೈದಾನದಲ್ಲಿ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಿಟಿಜನ್ಸ್ ಅಜೆಂಡಾ ಫಾರ್ ಬೆಂಗಳೂರು ಸಂಚಾಲಕ ಸಂದೀಪ್ ಅನಿರುಧನ್ ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular