ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯ ಮಹಾನಗರ ಪಾಲಿಕೆ ಕಚೇರಿಗಳಿಗೆ ಸರಣಿ ಬಾಂಬ್ ಬೆದರಿಕೆ ಇ-ಮೇಲ್ಗಳು ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಪಾಲಿಕೆ ಆಯುಕ್ತರ ಅಧಿಕೃತ ಇ-ಮೇಲ್ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶಗಳು ಬಂಧಿವೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಘಟನಾ ಸ್ಥಳಕ್ಕೆ ತೆರಳಿ ತೀವ್ರ ತಪಾಸಣೆ ನಡೆಸಿವೆ.
ಇಂದು ಬೆಳಿಗ್ಗೆ 11:35ಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ವೆಯಿಟ್ ಸ್ಮಿತ್ ಎಂಬ ಐಡಿಯಿಂದ ದೀರ್ಘವಾದ ಆಘಾತಕಾರಿ ಬೆದರಿಕೆ ಇ-ಮೇಲ್ ಬಂದಿದೆ. ಈ ಮೇಲ್ನಲ್ಲಿ ‘Khalistan National Army’ ಮತ್ತು ‘Babbar Khalsa (Parmar-Canada)’ ಹೆಸರುಗಳನ್ನು ಹಾಗೂ 1984ರ ಸಿಖ್ ನರಮೇಧದ ವಿಷಯವನ್ನು ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ.
ಮಹಾನಗರ ಪಾಲಿಕೆಯ ಕಚೇರಿಯ ವಿವಿಧ ವಿಭಾಗಗಳು, ಕೊಠಡಿಗಳು ಹಾಗೂ ಆವರಣದ ಪ್ರತಿಯೊಂದು ಭಾಗದಲ್ಲೂ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಶ್ವಾನ ದಳದ ನೆರವಿನೊಂದಿಗೆ ಅನುಮಾನಾಸ್ಪದ ವಸ್ತುಗಳಿಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತಾ ವ್ಯವಸ್ಥೆಯನ್ನೂ ಪರಿಶೀಲಿಸಲಾಗುತ್ತಿದೆ.
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಅವರಿಗೆ ಬಂದ ಇ-ಮೇಲ್ನಲ್ಲಿ, “ಪಾಲಿಕೆ ಕಟ್ಟಡದಲ್ಲಿ ಬಾಂಬ್ ಇಡಲಾಗಿದ್ದು, ಮಧ್ಯಾಹ್ನ 1.15ಕ್ಕೆ ಸ್ಫೋಟಿಸಲಾಗುವುದು” ಎಂದು ಅಪರಿಚಿತರು ಹೆದರಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪಾಲಿಕೆ ಆವರಣದಲ್ಲಿ ಆತಂಕ ನೆಲೆಸಿದೆ. ಸ್ಥಳಕ್ಕೆ ಮಾರ್ಕೆಟ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕಾಲಿಮಿರ್ಜಿ ನೇತೃತ್ವದ ತಂಡ, ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಧಾವಿಸಿ, ಕಚೇರಿಯ ಇಂಚಿಂಚೂ ಜಾಗವನ್ನು ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿವೆ.
ಹುಬ್ಬಳ್ಳಿಗೆ ಬಂದಿರುವ ಇ-ಮೇಲ್ನಲ್ಲಿ ಖಲಿಸ್ತಾನ್ ಉಗ್ರ ಸಂಘಟನೆಗಳ ಹೆಸರು, ಬೆಂಗಳೂರಿನ ನೈಸ್ (NICE) ಗ್ರೌಂಡ್ಸ್ನಲ್ಲಿ ನಡೆಯಲಿರುವ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ ಕಾರ್ಯಕ್ರಮ, ಬೆಂಗಳೂರು ಮೆಟ್ರೋ ಹಾಗೂ ನಟ ಅಮಿತಾಭ್ ಬಚ್ಚನ್ ಮನೆಗೆ ಬೆದರಿಕೆ ಹಾಕಿರುವ ಬಗ್ಗೆಯೂ ಇದೇ ವೇಳೆ ತಿಳಿದುಬಂದಿದೆ.
ನವೆಂಬರ್ 29 ರಂದು ಬೆಂಗಳೂರಿನ ನೈಸ್ (NICE) ಸೆಂಟರ್ ಗ್ರೌಂಡ್ಸ್ನಲ್ಲಿ ನಡೆಯಲಿರುವ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮದ ವೇದಿಕೆಯಲ್ಲಿ ಐಇಡಿ ಬಾಂಬ್ ಸ್ಫೋಟಿಸುವುದಾಗಿ ಹೆದರಿಸಲಾಗಿದೆ. ಸಾರ್ವಜನಿಕರು ಆ ದಿನ ನೈಸ್ ಗ್ರೌಂಡ್ಗೆ ಹೋಗದಂತೆ ಮತ್ತು ರಸ್ತೆಯಲ್ಲಿ ಐಫೋನ್ ಕಂಡುಬಂದರೆ ಮುಟ್ಟದಂತೆ ಆತಂಕಕಾರಿ ಸೂಚನೆ ನೀಡಲಾಗಿದೆ.
ನವೆಂಬರ್ 27 ರಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಮನೆ ಬಳಿ ಹಾಗೂ ನವೆಂಬರ್ 29 ರಂದು ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 3:11 ರಿಂದ ರಾತ್ರಿ 11:11 ರ ಅವಧಿಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.
ಶಾಲೆ, ಹೋಟೆಲ್, ವಿಮಾನ ನಿಲ್ದಾಣ, ನ್ಯಾಯಾಲಯಗಳಿಕೆ ಬಾಮ್ಬ್ ಬೆದರಿಕೆ ಬಳಿಕ ಇದೀಗ ಮಹಾನಗರ ಪಾಲಿಕೆ, ಮೆಟ್ರೋ ಸ್ಟೇಷನ್, ವಿವಿಧ ಕಾರ್ಯಕ್ರಮಗಳಿಗೂ ದುಷ್ಕರ್ಮಿಗಳು ಬಾಂಬ್ ಬೆದರಿಕೆಯೊಡ್ಡಿ ಸಾರ್ವಜನಿಕರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ.

