ಹಾಸನ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನಡುವಿನ ಜಟಾಪಟಿ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಜಿಲ್ಲಾಡಳಿತದಲ್ಲಿ ಲಂಚದ ವ್ಯವಹಾರ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರೆ, ಇದೀಗ ಜಿಲ್ಲಾಧಿಕಾರಿ ಸಾಮಾಜಿಕ ಜಾಲತಾಣದಲ್ಲಿ ಸಿಂಹ ಮತ್ತು ನಾಯಿಗಳ ಫೋಟೋ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ. ಈ ಪೋಸ್ಟ್ ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಿಂಹದ ಫೋಟೋ ಹಾಕಿ ಡಿಸಿಯಿಂದ ಕೌಂಟರ್!
ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಮ್ಮ ವಾಟ್ಸಾಪ್ ಹಾಗೂ ಎಕ್ಸ್ (X) ಖಾತೆಗಳಲ್ಲಿ ವಿಶೇಷ ಪೋಸ್ಟರ್ವೊಂದನ್ನು ಹಂಚಿಕೊಂಡಿದ್ದಾರೆ.
ಪೋಸ್ಟರ್ನಲ್ಲಿ ಸಿಂಹವೊಂದು ಶಾಂತವಾಗಿ ಕುಳಿತಿದ್ದು, ಅದರ ಸುತ್ತ ನಾಯಿಗಳು ಬೊಗಳುತ್ತಿರುವ ಚಿತ್ರವಿದೆ. ಇದರೊಂದಿಗೆ ‘NOT EVERY VOICE DESERVES A RESPONSE’ (ಪ್ರತಿಯೊಂದು ಧ್ವನಿಗೂ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ) ಎಂಬ ಇಂಗ್ಲಿಷ್ ಬರಹವನ್ನೂ ಪ್ರಕಟಿಸಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ನೇರವಾಗಿ ಪ್ರತಿಕ್ರಿಯಿಸುವ ಬದಲು ಈ ಪೋಸ್ಟರ್ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ಪೋಸ್ಟ್ ಪರ-ವಿರೋಧ ಅಭಿಪ್ರಾಯಗಳಿಗೂ ಕಾರಣವಾಗಿದೆ.
ಮೊದಲ ದಿನದಿಂದಲೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ: ಡಿಸಿ
ಇದಕ್ಕೂ ಮೊದಲು ಕುಮಾರಸ್ವಾಮಿ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಲತಾಕುಮಾರಿ, ತಮ್ಮ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
‘ಕರ್ತವ್ಯದ ಮೊದಲ ದಿನದಿಂದಲೇ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇನ್ನೂ ಏನೇನು ಆರೋಪಗಳು ಬರುತ್ತವೆಯೋ ಗೊತ್ತಿಲ್ಲ. ಆದರೆ ಇಂತಹ ಆರೋಪಗಳಿಗೆ ನಾವು ಹೆದರುವುದಿಲ್ಲ. ಎಲ್ಲವನ್ನೂ ಎದುರಿಸಲು ಸಿದ್ಧರಾಗಿಯೇ ಬಂದಿದ್ದೇವೆ’ ಎಂದು ಹೇಳಿದ್ದರು.
ಅಲ್ಲದೆ, ಕುಮಾರಸ್ವಾಮಿ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಮಹಿಳಾ ಅಧಿಕಾರಿಯೊಬ್ಬರ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ. ಸಾರ್ವಜನಿಕರು ಇಂತಹ ಆರೋಪಗಳನ್ನು ನಂಬಬಾರದು ಎಂದು ಮನವಿ ಮಾಡಿದ್ದರು.
ಹೆಚ್ಡಿಕೆ ಮಾಡಿದ್ದೇನು ಆರೋಪ?
ಇತ್ತೀಚೆಗೆ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ ಮಾಡಿದ್ದರು.
ಹಾಸನದಲ್ಲೇ ಜಿಲ್ಲಾಧಿಕಾರಿಯಾಗಿ ಮುಂದುವರಿಯಲು ಕೆ.ಎಸ್. ಲತಾಕುಮಾರಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರಿಗೆ ₹75 ಲಕ್ಷ ಲಂಚ ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ತಮ್ಮ ಆರೋಪಕ್ಕೆ ಪೂರಕವೆಂದು ಹೇಳಲಾದ ಜಿಲ್ಲಾಧಿಕಾರಿಯವರ ಆಪ್ತ ಸಹಾಯಕರ ವಾಟ್ಸ್ಆ್ಯಪ್ ಚಾಟ್ಗಳನ್ನು ಬಹಿರಂಗಪಡಿಸಿದ್ದರು.
ಈ ಆರೋಪಗಳಿಗೆ ತಿರುಗೇಟು ನೀಡಿರುವ ಜಿಲ್ಲಾಧಿಕಾರಿ ಲತಾಕುಮಾರಿ, ತಮ್ಮ ವಿರುದ್ಧ ಮಾಡಿರುವ ಲಂಚದ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ವಾಟ್ಸ್ಆ್ಯಪ್ ಚಾಟ್ಗಳ ಸತ್ಯಾಸತ್ಯತೆ ಕುರಿತು ಸಮಗ್ರ ತನಿಖೆಯಾಗಲಿ. ಚಾಟ್ಗಳನ್ನು ಎಡಿಟ್ ಮಾಡಲಾಗಿದೆ ಎಂದು ನಮ್ಮ ಪಿಎ ಹೇಳುತ್ತಿದ್ದಾರೆ. ಈ ವಿಚಾರವನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತರುತ್ತೇನೆ. ಅಲ್ಲದೆ, ಈ ಸಂಬಂಧ ಪೊಲೀಸ್ ಇಲಾಖೆ ಹಾಗೂ ಸೈಬರ್ ಕ್ರೈಂ ವಿಭಾಗಕ್ಕೂ ದೂರು ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಶಶಿಕಿರಣ್ ಮತ್ತು ಮತ್ತೊಬ್ಬ ವ್ಯಕ್ತಿಯ ನಡುವೆ ನಡೆದಿದೆ ಎನ್ನಲಾದ ವಾಟ್ಸಾಪ್ ಸಂಭಾಷಣೆಯ ಪ್ರತಿಗಳನ್ನು ಬಿಡುಗಡೆ ಮಾಡಿದ್ದರು.
ಸೈಬರ್ ಕ್ರೈಂ ಪೊಲೀಸರಿಗೆ ದೂರು
ಕುಮಾರಸ್ವಾಮಿ ಅವರ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಜಿಲ್ಲಾಧಿಕಾರಿ ಲತಾಕುಮಾರಿ, ವೈರಲ್ ಆಗಿರುವ ವಾಟ್ಸಾಪ್ ಚಾಟ್ನ ಸತ್ಯಾಸತ್ಯತೆ ಪತ್ತೆಹಚ್ಚಲು ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಈ ಚಾಟ್ ನಿಜವೇ ಅಥವಾ ಯಾರಾದರೂ ಎಡಿಟ್ ಮಾಡಿ ಸೃಷ್ಟಿಸಿರುವುದೇ ಎಂಬುದನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಜಿಲ್ಲಾಧಿಕಾರಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ ಲತಾಕುಮಾರಿ ಹಂಚಿಕೊಂಡಿರುವ ಸಿಂಹದ ಪೋಸ್ಟರ್ ಇದೀಗ ಹೆಚ್ಡಿಕೆ ಆರೋಪಕ್ಕೆ ನೀಡಿದ ಪರೋಕ್ಷ ಉತ್ತರವೇ ಎಂಬ ಚರ್ಚೆ ಜೋರಾಗಿದೆ.
ಒಟ್ಟಿನಲ್ಲಿ, ಹಾಸನ ಜಿಲ್ಲಾಡಳಿತದ ಲಂಚದ ಆರೋಪ ಪ್ರಕರಣ ಈಗ ರಾಜಕೀಯ ಆರೋಪ-ಪ್ರತ್ಯಾರೋಪದ ಜೊತೆಗೆ ಸಾಮಾಜಿಕ ಜಾಲತಾಣದ ಪೋಸ್ಟ್ಗಳ ಮೂಲಕವೂ ಹೊಸ ತಿರುವು ಪಡೆದುಕೊಂಡಿದೆ. ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಷ್ಟೇ ತಿಳಿಯಬೇಕಿದೆ.

