ಹಾಸನ: ನಾನು ನನ್ನದೇ ಎಂಬುದು ಅಧರ್ಮ ನಾವು, ನಮ್ಮದು ಎನ್ನುವುದು ಧರ್ಮ. ನಿಮಗಾಗಿ ಬದುಕುವುದು ಕೇವಲ ಜೀವನ, ಜನರಿಗಾಗಿ ಜನರಿಗೋಸ್ಕರ ಬದುಕುವುದು ಬಹಳ ಶ್ರೇಷ್ಠವಾದ ಧರ್ಮ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಹಾಸನಾಂಬ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿ, ವಾಲಿಬಾಲ್ ಪಂದ್ಯಾವಳಿ, ಫಲಪುಷ್ಪ ಪ್ರದರ್ಶನ ಹಾಗೂ ಶ್ವಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಈ ಬಾರಿ ಹೊಸದಾಗಿ ಪಂದ್ಯಾವಳಿಗಳನ್ನು ಏರ್ಪಡಿಸಿದ್ದಾರೆ ಎಂದರು.
ರಾಜ್ಯದ ಜನತೆಗೆ ಸುಖ, ಶಾಂತಿ, ನೆಮ್ಮದಿ ದೊರೆಯಲೆಂದು ಹಾಸನಾಂಬ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ, ಪೂಜೆ ಮತ್ತು ಭಕ್ತಿ ಪ್ರದರ್ಶನಕೋಸ್ಕರವಲ್ಲ, ಮನುಷ್ಯರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಇರುವಂತಹ ಒಂದು ದಾರಿಗಳು ಎಂದು ಹೇಳಿದರು.
ಭಕ್ತರು ಮತ್ತು ಭಗವಂತ ಸಂಬಂಧ ಬೆಳಸುವ ಸ್ಥಳ ದೇವಸ್ಥಾನ. ಅದಕ್ಕೆ ಎಲ್ಲಾ ಭಕ್ತಾದಿಗಳು ಗಂಟೆಗಟ್ಟಲೆ ಕಾಯ್ದುಕೊಂಡು ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ದರ್ಶನ ಪಡೆಯುತ್ತಾರೆ ಎಂದು ತಿಳಿಸಿದರು.
ನಾನು ನನ್ನದೇ ಎಂಬುದು ಅಧರ್ಮ ನಾವು, ನಮ್ಮದು ಎನ್ನುವುದು ಧರ್ಮ ಎಂದು ಹೇಳಿದ ಅವರು ನಿಮಗಾಗಿ ಬದುಕುವುದು ಕೇವಲ ಜೀವನ ಜನರಿಗಾಗಿ ಜನರಿಗೋಸ್ಕರ ಬದುಕುವುದು ಬಹಳ ಶ್ರೇಷ್ಠವಾದ ಧರ್ಮ ಎಂದರು.
ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳು ತುಂಬಾ ಶಿಸ್ತಿನಿಂದ ಶ್ರೀ ಹಾಸನಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದರು.
ನ್ಯಾಯ ನೀತಿಯಿಂದ ಪ್ರಜಾಸೇವೆ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸೋಣ. ಮಾನವೀಯತೆ ಮತ್ತು ಧರ್ಮವನ್ನು ಎರಡು ಸಹ ಸಮವಾಗಿರಬೇಕು, ಈ ಭೂಮಿಯಲ್ಲಿ ಸೈನಿಕ, ಶಿಕ್ಷಕ, ಕಾರ್ಮಿಕ ಹಾಗೂ ಕೃಷಿಕ ಈ ನಾಲ್ಕು ಜನ ನಮ್ಮ ಸಮಾಜದ ಆಧಾರ ಸ್ತಂಭಗಳು ಎಂದು ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಮುಖ್ಯವಾಗಿದ್ದು, ಶಾಸಕಾಂಗದ ಮತ್ತು ಕಾರ್ಯಾಂಗ ತಪ್ಪುಗಳನ್ನು ತಿದ್ದುವ ಕೆಲಸದಲ್ಲಿ ನ್ಯಾಯಾಂಗ, ಪತ್ರಿಕಾರಂಗ ಪ್ರಮುಖ ಪಾತ್ರವಹಿಸುತ್ತದೆ, ಧಾರ್ಮಿಕತೆಯನ್ನು ಉಳಿಸಿಕೊಂಡು ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡೋಣ ಎಂದರು.
ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿ, 50 ವರ್ಷದ ಹಿಂದಿನಿದಲೂ ಮಹಾನಗರ ಪಾಲಿಕೆ ಆವರಣದಲ್ಲಿ ವಸ್ತುಪ್ರದರ್ಶನ ನಡೆಯುತ್ತಿತ್ತು, ಮಹಾನಗರ ಪಾಲಿಕೆಯವರು ತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಲು ಬಳಸುತ್ತಿದ್ದ ಜಾಗವನ್ನು 8 ದಿನಗಳಲ್ಲಿ ತೆರವುಗೊಳಿಸಿ ಹಾಸನಾಂಬ ಕ್ರೀಡೋತ್ಸವಕ್ಕೆ ಬಳಸಿಕೊಳ್ಳಲಾಗಿದೆ ಎಂದರು.
ರಂಗೋಲಿ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ಜಾನುವಾರುಗಳ ಪ್ರದರ್ಶನ, ವಾಲಿಬಾಲ್, ಕಬಡ್ಡಿ ಪಂದ್ಯಾವಳಿ, ಪಾಕಸ್ಪರ್ಧೆ, ಫಲಪುಷ್ಪ ಪ್ರದರ್ಶನ, ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ ಹೀಗೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದವರೆಲ್ಲರಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸಿದ್ದೇವೆ. ಹಾಸನಾಂಬ ಜಾತ್ರಾ ಮಹೋತ್ಸವನ್ನು ನಾಡಹಬ್ಬ ಎಂದು ಪರಿಗಣಿಸಿ ಈ ಹಬ್ಬವು ಮುಂದಿನ ದಿನಗಳಲ್ಲಿ ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ನಡೆಯಬೇಕು ಎಂದು ತಿಳಿಸಿದರು.
ಇದುವರೆಗೆ 18 ರಿಂದ 20 ಲಕ್ಷ ಜನ ಹಾಸನಾಂಬೆಯ ದರ್ಶನ ಪಡೆದುಕೊಂಡಿದ್ದು, ಶ್ರೀ ಹಾಸನಾಂಬ ದೇವಿಯ ಪವಾಡವನ್ನು ಗಮನಿಸಿದ ಭಕ್ತಾಧಿಗಳು ಅಮೆರಿಕದಿಂದ ಹಾಸನಾಂಬೆ ದರ್ಶನ ಪಡೆಯಲು ಭಕ್ತಾದಿಗಳು ಬರುತ್ತಿರುವುದಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು ಎಂದು ತಿಳಿಸಿದರು.
ಸಂಸದ ಶ್ರೇಯಸ್ ಎಂ. ಪಟೇಲ್, ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಗೌಡ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಮೂರ್ತಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಂಜಿತ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಪ್ಪ ಪಟೇಲ್, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲ, ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಮತ್ತಿತರರು ಉಪಸ್ಥಿತರಿದ್ದರು.

