ಗುಜರಾತ್: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಿಹಿತಿಂಡಿ, ಉಡುಗೊರೆ ಅಥವಾ ಬೋನಸ್ ನೀಡುವುದು ಸಾಮಾನ್ಯ. ಆದರೆ ಗುಜರಾತ್ನ ಸೂರತ್ನ ಜವಳಿ ಉದ್ಯಮಿಯೊಬ್ಬರು ತಮ್ಮ ಸಿಬ್ಬಂದಿಗೆ ನೀಡಿರುವ ದೀಪಾವಳಿ ಉಡುಗೊರೆ ಇದೀಗ ಎಲ್ಲರ ಗಮನ ಸೆಳೆದಿದೆ. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ 20 ಉದ್ಯೋಗಿಗಳಿಗೆ ತಲಾ ₹1 ಲಕ್ಷಕ್ಕೂ ಅಧಿಕ ನಗದು ಬೋನಸ್ ನೀಡುವ ಮೂಲಕ ಉದ್ಯಮಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ವಿಶೇಷ ಉಡುಗೊರೆ ನೀಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೂರತ್ನ ಜವಳಿ ವ್ಯಾಪಾರಿ ರಾಮ್ ಸ್ವರೂಪ್ ಮುಂಡೆ ಉದ್ಯೋಗಿಗಳಿಗೆ ಇಂತಹ ದೊಡ್ಡ ಮೊತ್ತದ ಬೋನಸ್ ನೀಡಿದ ಉದ್ಯಮಿ. ಕೇವಲ ಹಣ ನೀಡುವುದಷ್ಟೇ ಅಲ್ಲದೆ, ಅದನ್ನು ಉಡುಗೊರೆಯಾಗಿ ನೀಡಿದ ರೀತಿಯೂ ವಿಶೇಷವಾಗಿತ್ತು. ₹10ರಿಂದ ₹500ರವರೆಗಿನ ವಿವಿಧ ಮುಖಬೆಲೆಯ ಹೊಸ ನೋಟುಗಳ ಕಂತೆಗಳನ್ನು ಬೆಳ್ಳಿ ತಟ್ಟೆಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಿ ಉದ್ಯೋಗಿಗಳಿಗೆ ನೀಡಲಾಗಿದೆ.
ಬೋನಸ್ ನೋಡಿ ಭಾವುಕರಾದ ಉದ್ಯೋಗಿಗಳು!
ಉದ್ಯೋಗಿಗಳಿಗೆ ಬೋನಸ್ ನೀಡುವ ಕಾರ್ಯಕ್ರಮದಲ್ಲಿ ಉದ್ಯಮಿಯ ಪತ್ನಿಯೂ ಭಾಗವಹಿಸಿದ್ದರು. ಅವರ ಕೈಯಿಂದಲೇ ಸಿಬ್ಬಂದಿಗೆ ನಗದು ಉಡುಗೊರೆಗಳನ್ನು ನೀಡಲಾಯಿತು. ಅನಿರೀಕ್ಷಿತವಾಗಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಉಡುಗೊರೆಯಾಗಿ ಪಡೆದ ಮಹಿಳಾ ಉದ್ಯೋಗಿಗಳು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಈ ಕ್ಷಣಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
https://x.com/NewsAlgebraIND/status/2119124347420123489?s=20
ಉದ್ಯೋಗಿಗಳು ನನ್ನ ಕುಟುಂಬದ ಸದಸ್ಯರು
ತಮ್ಮ ಈ ವಿಶೇಷ ನಿರ್ಧಾರದ ಬಗ್ಗೆ ಮಾತನಾಡಿರುವ ರಾಮ್ ಸ್ವರೂಪ್ ಮುಂಡೆ, ಬಾಲ್ಯದಲ್ಲಿ ತಾವು ಸಾಕಷ್ಟು ಬಡತನವನ್ನು ಅನುಭವಿಸಿದ್ದಾಗಿ ಹೇಳಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಸಾಮಾನ್ಯ ಕುಟುಂಬಗಳು ಎದುರಿಸುವ ಆರ್ಥಿಕ ಸಂಕಷ್ಟಗಳ ಬಗ್ಗೆ ತಮಗೆ ಚೆನ್ನಾಗಿ ತಿಳಿದಿದೆ ಎಂದು ತಿಳಿಸಿದ್ದಾರೆ.
ತಮ್ಮ ವ್ಯವಹಾರದ ಬೆಳವಣಿಗೆಗೆ ವರ್ಷವಿಡೀ ಶ್ರಮಿಸುವ ಉದ್ಯೋಗಿಗಳು ಕೇವಲ ಕೆಲಸಗಾರರಲ್ಲ, ಬದಲಾಗಿ ತಮ್ಮ ಕುಟುಂಬದ ಸದಸ್ಯರು ಎಂದು ಅವರು ಹೇಳಿದ್ದಾರೆ. ತಮ್ಮ ಸಂಸ್ಥೆಯ ಸಿಬ್ಬಂದಿಯೂ ಯಾವುದೇ ಆರ್ಥಿಕ ತೊಂದರೆಯಿಲ್ಲದೆ ಸಂತೋಷದಿಂದ ದೀಪಾವಳಿ ಆಚರಿಸಬೇಕು ಎಂಬ ಉದ್ದೇಶದಿಂದ ಈ ಬೋನಸ್ ನೀಡಿರುವುದಾಗಿ ತಿಳಿಸಿದ್ದಾರೆ.
ಉದ್ಯಮಿಯ ನಡೆಗೆ ನೆಟ್ಟಿಗರ ಮೆಚ್ಚುಗೆ
ಉದ್ಯೋಗಿಗಳಿಗೆ ಬೋನಸ್ ನೀಡುವ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯಮಿಯ ಉದಾರ ಮನಸ್ಸಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉದ್ಯೋಗಿಗಳನ್ನು ಕುಟುಂಬದ ಸದಸ್ಯರಂತೆ ಕಾಣುವ ಅವರ ನಡೆಗೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೆಲವರು ಇಂತಹ ಉದ್ಯೋಗದಾತರು ಎಲ್ಲರಿಗೂ ಸಿಗಲಿ ಎಂದು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ತಮಾಷೆಯಾಗಿ ಅವರ ಸಂಸ್ಥೆಯಲ್ಲಿ ತಮಗೂ ಕೆಲಸ ಕೊಡಿಸುವಂತೆ ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ, ದೀಪಾವಳಿ ಸಂದರ್ಭದಲ್ಲಿ ಉದ್ಯಮಿಯೊಬ್ಬರು ತಮ್ಮ ಸಿಬ್ಬಂದಿಯೊಂದಿಗೆ ಸಂತೋಷ ಹಂಚಿಕೊಂಡಿರುವ ಈ ಘಟನೆ ಎಲ್ಲರ ಗಮನ ಸೆಳೆದಿದೆ.

