ಬೆಂಗಳೂರು- ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 2ರಿಂದ 9 ದಿನಗಳ ಕಾಲ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ನಡೆಯಲಿದೆ.
ಡಿಸೆಂಬರ್ 2ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸಭೆಯ ಅಧಿವೇಶನ ಸಮಾವೇಶಗೊಳ್ಳಲಿದ್ದು, ಈ ಕುರಿತು ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯುವುದು ವಾಡಿಕೆ. ಆದರೆ ಈ ಬಾರಿ ಅಧಿವೇಶನವನ್ನು 9 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಡಿಸೆಂಬರ್ 2ರಿಂದ 11ರವರೆಗೆ ಅಧಿವೇಶನ ನಡೆಸಲು ಕಾರ್ಯಕ್ರಮಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಬಾರಿ ಡಿಸೆಂಬರ್ 5ರಂದು ಶನಿವಾರವೂ ಅಧಿವೇಶನ ನಡೆಯಲಿದೆ. ಸಾಮಾನ್ಯವಾಗಿ ಕ್ಷೇತ್ರಗಳಲ್ಲಿನ ಕಾರ್ಯಕ್ರಮಗಳಲ್ಲಿ ಶಾಸಕರು ಭಾಗವಹಿಸುವ ಹಿನ್ನೆಲೆಯಲ್ಲಿ ಶನಿವಾರದಂದು ಅಧಿವೇಶನ ನಡೆಸಲಾಗುತ್ತಿರಲಿಲ್ಲ. ಆದರೆ ಈ ಬಾರಿ ಶನಿವಾರವೂ ಕಲಾಪ ಮುಂದುವರಿಯಲಿದೆ.
ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಪ್ರಮುಖ ಆಡಳಿತಾತ್ಮಕ, ಅಭಿವೃದ್ಧಿ ಹಾಗೂ ಜನಪರ ವಿಚಾರಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದ್ದು, ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹಲವು ವಿಷಯಗಳನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ.

