HomeKarnatakaಗಸ್ತು ನೆಪದಲ್ಲಿ ಹೊಯ್ಸಳ ವಾಹನದಲ್ಲಿ ಬಂದು ಯುವಕನ ಮೇಲೆ ಹಲ್ಲೆ; ಹಣ ವಸೂಲಿ ಆರೋಪ: ಇಬ್ಬರು...

ಗಸ್ತು ನೆಪದಲ್ಲಿ ಹೊಯ್ಸಳ ವಾಹನದಲ್ಲಿ ಬಂದು ಯುವಕನ ಮೇಲೆ ಹಲ್ಲೆ; ಹಣ ವಸೂಲಿ ಆರೋಪ: ಇಬ್ಬರು ಪೊಲೀಸರು ಅರೆಸ್ಟ್

ಮಂಗಳೂರು: ಇದು ನಿಜಕ್ಕೂ ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ. ರಾತ್ರಿ ಗಸ್ತಿನಲ್ಲಿರುವ ಪೊಲೀಸರು ಹೊಯ್ಸಳ ವಾಹನಲ್ಲಿ ಬಂದು ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಹಣ ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಗಸ್ತು ಹೆಸರಿನಲ್ಲಿ ಹೊಯ್ಸಳ ವಾಹನದಲ್ಲಿ ಬಂದು ಯುವಕನೊಬ್ಬನಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಬ್ಬಂದಿಯಾದ ಶಿವರಾಜ್ ಮತ್ತು ಹಿರಣ್ಣ ಬೆನ್ನಿ ಬಂಧಿತರು. ಇವರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಮಂಗಳೂರಿನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುವ ವಿಟ್ಲ ನಿವಾಸಿ ರವಿರಾಜ್ ನೀಡಿದ ದೂರಿನ ಆಧಾರದ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಯುವಕ ರವಿರಾಜ್ ನೀಡಿದ ದೂರಿನ ಪ್ರಕಾರ, ರವಿರಾಜ್ ಮಂಗಳೂರಿನ ನೆಹರು ಮೈದಾನದಲ್ಲಿ ವಾಕಿಂಗ್ ಮುಗಿಸಿ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದರು. ಆಗ ಹೊಯ್ಸಳ ವಾಹನದಲ್ಲಿ ಬಂದ ಹಿರಣ್ಣ ಬೆನ್ನಿ ಮತ್ತು ಶಿವರಾಜ್ ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ರವಿರಾಜ್ ಅವರ ಜೇಬಿನಿಂದ ಮೊಬೈಲ್ ತೆಗೆದು, ಮೊಬೈಲ್ ಕವರ್‌ನಲ್ಲಿದ್ದ ₹300 ಹಣವನ್ನು ತೆಗೆದುಕೊಂಡಿದ್ದಾರೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮರುದಿನ ಮತ್ತೆ ಹೊಯ್ಸಳ ವಾಹನದಲ್ಲಿ ಬಂದ ಹಿರಣ್ಣ ಬೆನ್ನಿ ಮತ್ತು ಶಿವರಾಜ್, ರವಿರಾಜ್ ಅವರಿಗೆ ಮತ್ತೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮೊಬೈಲ್ ಕವರ್‌ನಲ್ಲಿದ್ದ ಕರ್ನಾಟಕ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್‌ನ ಎರಡು ಎಟಿಎಂ ಕಾರ್ಡ್‌ಗಳು, ₹1,000 ನಗದು ಹಾಗೂ ಮೋಟಾರು ಸೈಕಲ್‌ನ ಕೀಯನ್ನು ತೆಗೆದುಕೊಂಡಿದ್ದಾರೆ. ಮೊಬೈಲ್‌ನ ಪಾಸ್‌ವರ್ಡ್ ಪಡೆದು ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದ್ದಾರೆ. ₹2,000 ನೀಡಬೇಕು, ಇಲ್ಲದಿದ್ದರೆ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿದ್ದಾರಂತೆ.

ಅಷ್ಟೇ ಅಲ್ಲ ಬಳಿಕ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಉಮಾನಾಥ್ ಅವರು ಬೈಕ್ ಅನ್ನು ವಶಪಡಿಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿ ಬಲವಂತವಾಗಿ ನಗದು ಪಡೆದಿದ್ದಾರೆ ಎಂದು ದೂರಿನಲ್ಲಿ ರವಿರಾಜ್ ತಿಳಿಸಿದ್ದಾರೆ.

ರವಿರಾಜ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಸೂಚನೆ ನೀಡಿದ ಬೆನ್ನಲ್ಲೇ ಪೊಲೀಸ್ ಸಿಬ್ಬಂದಿಗಳಾದ ಹಿರಣ್ಣ ಬೆನ್ನಿ ಮತ್ತು ಶಿವರಾಜ್ ಅವರನ್ನು ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ. ಮತ್ತೊಬ್ಬ ಸಿಬ್ಬಂದಿ ಉಮಾನಾಥ್ ವಿರುದ್ಧ ತನಿಖೆ ನಡೆಯುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular