ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀಕರತೆ ಅನಾವರಣಗೊಂಡಿದೆ. ಜನರಿಂದ ತುಂಬಿದ್ದ ಮಾರುಕಟ್ಟೆ ಏಕಾಏಕಿ ಸಾವು-ನೋವಿನ ತಾಣವಾಗಿ ಮಾರ್ಪಟ್ಟಿದೆ. ಕ್ಷಣಾರ್ಧದಲ್ಲಿ ಎಲ್ಲೆಡೆ ಆಕ್ರಂದನ, ರಕ್ತಸಿಕ್ತ ದೃಶ್ಯಗಳು, ಅವಶೇಷಗಳಡಿ ಸಿಲುಕಿದ ಜೀವಗಳು… ಯೆಮನ್ನ ತೈಜ್ ಪ್ರಾಂತ್ಯದಲ್ಲಿ ನಡೆದ ಭೀಕರ ದಾಳಿಯಲ್ಲಿ ಬರೋಬ್ಬರಿ 30 ಮಂದಿ ಮೃತಪಟ್ಟಿದ್ದು, ಎಂಟು ಜನರು ಗಾಯಗೊಂಡಿದ್ದಾರೆ. ಧಂತೇರಸ್ ಸಂಭ್ರಮದಂತೆ ಸಾಮಾನ್ಯ ದಿನಚರಿಯಲ್ಲಿದ್ದ ಜನರ ಬದುಕು ಯುದ್ಧದ ಅಟ್ಟಹಾಸಕ್ಕೆ ದುರಂತದಲ್ಲಿ ಅಂತ್ಯಗೊಂಡಿದೆ.
ಹೌದು. ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಆತಂಕ ಹೆಚ್ಚಾಗಿದ್ದು, ಯೆಮನ್ನ ತೈಜ್ ಪ್ರಾಂತ್ಯದ ಮಾರುಕಟ್ಟೆಯೊಂದರ ಮೇಲೆ ಸೌದಿ ಅರೇಬಿಯಾ ವೈಮಾನಿಕ ದಾಳಿ ನಡೆಸಿದೆ ಎಂದು ಇರಾನ್ ಬೆಂಬಲಿತ ಹೌತಿ ಬಂಡುಕೋರರು ಆರೋಪಿಸಿದ್ದಾರೆ. ಶುಕ್ರವಾರ ನಡೆದ ಈ ದಾಳಿಯಲ್ಲಿ 30 ಮಂದಿ ಮೃತಪಟ್ಟಿದ್ದು, ಎಂಟು ಜನರು ಗಾಯಗೊಂಡಿದ್ದಾರೆ ಎಂದು ಹೌತಿಗಳ ಆರೋಗ್ಯ ಸಚಿವಾಲಯ ತಿಳಿಸಿದೆ. ಅವಶೇಷಗಳಡಿ ಇನ್ನೂ ಮೃತದೇಹಗಳು ಸಿಲುಕಿರುವ ಸಾಧ್ಯತೆಯಿದ್ದು, ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಮಾರುಕಟ್ಟೆ ಮೇಲೆ ಹಲವು ವೈಮಾನಿಕ ದಾಳಿ
ಹೌತಿಗಳ ನಿಯಂತ್ರಣದಲ್ಲಿರುವ ಅಲ್-ವಜಿಯಾ ನಗರದ ಮಾರುಕಟ್ಟೆಯ ಮೇಲೆ ಸೌದಿ ಅರೇಬಿಯಾದ ಯುದ್ಧ ವಿಮಾನಗಳು ಹಲವು ಬಾರಿ ದಾಳಿ ನಡೆಸಿವೆ ಎಂದು ಹೌತಿ ಆರೋಗ್ಯ ಸಚಿವಾಲಯದ ವಕ್ತಾರ ಅನಿಸ್ ಅಲ್-ಅಸ್ಬಾಹಿ ತಿಳಿಸಿದ್ದಾರೆ.
ಹೌತಿಗಳ ಸಬಾ ಸುದ್ದಿ ಸಂಸ್ಥೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ದಾಳಿಯಲ್ಲಿ 30 ಮಂದಿ ಸಾವನ್ನಪ್ಪಿದ್ದು, ಎಂಟು ಜನರು ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಹೌತಿ ಬಂಡುಕೋರರ ವಿರುದ್ಧ ಯೆಮನ್ ಸರ್ಕಾರದ ಆರೋಪ
ಇದೇ ಘಟನೆಗೆ ಸಂಬಂಧಿಸಿದಂತೆ ಯೆಮನ್ ಸರ್ಕಾರದ ಪಡೆಗಳು ಹೌತಿ ಬಂಡುಕೋರರ ವಿರುದ್ಧ ಗಂಭೀರ ಆರೋಪ ಮಾಡಿವೆ. ಮಾರುಕಟ್ಟೆಯ ಮೇಲೆ ಹೌತಿಗಳು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿರುವ ಸರ್ಕಾರ, ಇದನ್ನು ಯುದ್ಧಾಪರಾಧ ಎಂದು ಖಂಡಿಸಿದೆ.
ತೈಜ್ ಪ್ರಾಂತ್ಯದ ಅಧಿಕಾರಿಗಳು ಕೂಡ ಹೌತಿಗಳ ಕ್ಷಿಪಣಿ ದಾಳಿಯಿಂದ ಈ ದುರಂತ ಸಂಭವಿಸಿದೆ ಎಂದು ಹೇಳಿದ್ದು, ಯಾವುದೇ ವೈಮಾನಿಕ ದಾಳಿ ನಡೆದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಮತ್ತೆ ಉಲ್ಬಣಗೊಂಡ ಯೆಮನ್ ಸಂಘರ್ಷ
ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮತ್ತು ಸೌದಿ ಅರೇಬಿಯಾ ಬೆಂಬಲಿತ ಯೆಮನ್ ಸರ್ಕಾರದ ಪಡೆಗಳ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದೆ. ಹಲವು ವರ್ಷಗಳ ಕಾಲ ತುಸು ಶಾಂತವಾಗಿದ್ದ ಪರಿಸ್ಥಿತಿ ಜುಲೈ ತಿಂಗಳಿನಿಂದ ಮತ್ತೆ ಯುದ್ಧದ ಸ್ವರೂಪ ಪಡೆದುಕೊಂಡಿದೆ.
ಇದರ ನಡುವೆ ಸೌದಿ ಅರೇಬಿಯಾ ಹೌತಿಗಳ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದರೆ, ಹೌತಿಗಳು ಕೂಡ ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು, ತೈಲ ಘಟಕಗಳು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿರುವುದಾಗಿ ವರದಿಯಾಗಿದೆ.
ಮೆಕ್ಕಾ ಬಳಿ ಡ್ರೋನ್, ಮದೀನಾ ಸಮೀಪ ಕ್ಷಿಪಣಿ ತಡೆ
ಶುಕ್ರವಾರ ಸೌದಿ ನೇತೃತ್ವದ ಮೈತ್ರಿಕೂಟವು ಇಸ್ಲಾಂ ಧರ್ಮದ ಪವಿತ್ರ ನಗರವಾದ ಮೆಕ್ಕಾ ಪ್ರದೇಶದಲ್ಲಿ ಡ್ರೋನ್ ಒಂದನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ. ಆದರೆ ಡ್ರೋನ್ ಎಲ್ಲಿಂದ ಬಂದಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಇದಕ್ಕೂ ಮುನ್ನ ಗುರುವಾರ ಮದೀನಾ ಸಮೀಪ ಹೌತಿ ಕ್ಷಿಪಣಿಯನ್ನು ತಡೆದಿರುವುದಾಗಿ ಮೈತ್ರಿಕೂಟ ಹೇಳಿಕೊಂಡಿತ್ತು. ಆದರೆ ಈ ಆರೋಪವನ್ನು ಹೌತಿಗಳು ನಿರಾಕರಿಸಿದ್ದು, ಇದೊಂದು ಸುಳ್ಳು ಆರೋಪ ಎಂದು ತಿರುಗೇಟು ನೀಡಿವೆ.

