HomeKarnatakaಕಲ್ಯಾಣ ಕರ್ನಾಟಕ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಖಾಲಿ ಹುದ್ದೆಗಳ ಭರ್ತಿಗೆ ಸೂಚನೆ

ಕಲ್ಯಾಣ ಕರ್ನಾಟಕ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಖಾಲಿ ಹುದ್ದೆಗಳ ಭರ್ತಿಗೆ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ವೇಗ ನೀಡುವುದರ ಜತೆಗೆ, 371(ಜೆ) ಅಡಿಯಲ್ಲಿ ಈ ಭಾಗದ ಜನರಿಗೆ ದೊರೆಯಬೇಕಾದ ಸಾಂವಿಧಾನಿಕ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಹಾಗೂ ಸಂವಿಧಾನದ 371(ಜೆ) ವಿಧಿಯ ಅನುಷ್ಠಾನ ಕುರಿತ ಉಪಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಸೂಚನೆ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ಹಾಗೂ ಈ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನ್ಯಾಯಯುತ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸಂವಿಧಾನದ 371(ಜೆ) ವಿಧಿಯನ್ನು ಜಾರಿಗೆ ತರಲಾಗಿದೆ. ಈ ಮಹತ್ವದ ಸಂವಿಧಾನಾತ್ಮಕ ಆಶಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಅನುಷ್ಠಾನದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ವಿಳಂಬ ನೀತಿ ತೋರಬಾರದು ಎಂದು ಸೂಚಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಲ್ಯಾಣ ಕರ್ನಾಟಕದ ಜನರು ಈ ಕಾಯ್ದೆಯಡಿ ಶಿಕ್ಷಣ, ಉದ್ಯೋಗ ಸೇರಿದಂತೆ ತಮಗೆ ದೊರೆಯಬೇಕಾದ ಸೌಲಭ್ಯಗಳನ್ನು ಅಧಿಕಾರಯುತವಾಗಿ ಕೇಳುತ್ತಿದ್ದಾರೆಯೇ ಹೊರತು ಯಾರ ಬಳಿಯೂ ಭಿಕ್ಷೆ ಬೇಡುತ್ತಿಲ್ಲ. ಇದು ಸಂವಿಧಾನವೇ ನೀಡಿರುವ ಅವರ ಹಕ್ಕು, ಹೀಗಾಗಿ, 371(ಜೆ) ವಿಧಿಯ ಅನುಷ್ಠಾನವನ್ನು ಅಧಿಕಾರಿಗಳು ಹಗುರವಾಗಿ ಪರಿಗಣಿಸದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದಿಂದ ಹೊರಗಿರಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಆದ್ಯತೆ ಮೇರೆಗೆ ಭರ್ತಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ವೇಗ ನೀಡುವುದರ ಜತೆಗೆ, 371(ಜೆ) ಅಡಿಯಲ್ಲಿ ಈ ಭಾಗದ ಜನರಿಗೆ ದೊರೆಯಬೇಕಾದ ಸಾಂವಿಧಾನಿಕ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ನೀಡುವ ನಿರ್ದೇಶನಗಳು ಕೇವಲ ದಾಖಲೆಗಳಿಗೆ ಸೀಮಿತವಾಗಬಾರದು. ಅವುಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಿ, ಮುಂದಿನ ಸಭೆಯಲ್ಲಿ ಸಾಧಿಸಿರುವ ಪ್ರಗತಿಯ ಸ್ಪಷ್ಟ ಅಂಕಿ-ಅಂಶಗಳನ್ನು ಸಲ್ಲಿಸಬೇಕು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ಕಲಬುರಗಿಯಲ್ಲಿ ‘ಲೀಪ್ ಗ್ರೋತ್ ಲ್ಯಾಬ್’ ಸ್ಥಾಪನೆಗೆ ಮಹತ್ವದ ಹೆಜ್ಜೆ

ಕರ್ನಾಟಕದಲ್ಲಿ ನಾವೀನ್ಯತೆ, ತಂತ್ರಜ್ಞಾನ ಆಧಾರಿತ ಸಂಶೋಧನೆ ಹಾಗೂ ಉದ್ಯಮಶೀಲತೆಯನ್ನು ರಾಜ್ಯದ ಎಲ್ಲ ಭಾಗಗಳಿಗೂ ವಿಸ್ತರಿಸುವ ಉದ್ದೇಶದ ‘ಲೀಪ್ ಗ್ರೋತ್ ಲ್ಯಾಬ್’ ಯೋಜನೆಯಡಿ ಕಲಬುರಗಿಯಲ್ಲಿ ನಾವೀನ್ಯತಾ ಕೇಂದ್ರ ಸ್ಥಾಪಿಸಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಈ ಕೇಂದ್ರಕ್ಕಾಗಿ ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿಯು ಉಚಿತವಾಗಿ ಭೂಮಿ ಮಂಜೂರು ಮಾಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಯುವಜನರಲ್ಲಿರುವ ನವೀನ ಆಲೋಚನೆಗಳು, ಸಂಶೋಧನಾ ಸಾಮರ್ಥ್ಯ ಮತ್ತು ಉದ್ಯಮಶೀಲತೆಯ ಆಸಕ್ತಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಈ ಯೋಜನೆಯ ಉದ್ದೇಶ. ಬೆಂಗಳೂರಿಗೆ ಸೀಮಿತವಾಗಿರುವ ತಂತ್ರಜ್ಞಾನ ಆಧಾರಿತ ಉದ್ಯಮ ವ್ಯವಸ್ಥೆಯನ್ನು ರಾಜ್ಯದ ಇತರ ನಗರಗಳಿಗೂ ವಿಸ್ತರಿಸಿ, ಸ್ಥಳೀಯ ಪ್ರತಿಭೆಗಳು ತಮ್ಮ ಜಿಲ್ಲೆಗಳಲ್ಲಿಯೇ ಉದ್ಯಮ ಆರಂಭಿಸಲು ಮತ್ತು ಉದ್ಯೋಗ ಸೃಷ್ಟಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಲೀಪ್ ಗ್ರೋತ್ ಲ್ಯಾಬ್ ಕೇವಲ ಮೂಲಸೌಕರ್ಯ ಕೇಂದ್ರವಾಗಿರದೆ, ನವೋದ್ಯಮಿಗಳು, ಯುವ ಉದ್ಯಮಿಗಳು ಹಾಗೂ ಸಂಶೋಧಕರಿಗೆ ಮಾರ್ಗದರ್ಶನ, ತಾಂತ್ರಿಕ ನೆರವು, ಅತ್ಯಾಧುನಿಕ ಸೌಲಭ್ಯಗಳು ಮತ್ತು ಬಂಡವಾಳ ಹೂಡಿಕೆದಾರರ ಸಂಪರ್ಕ ಕಲ್ಪಿಸುವ ಸಮಗ್ರ ನಾವೀನ್ಯತಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಆರಂಭಿಕ ಹಂತದ ನವೋದ್ಯಮಗಳು ತಮ್ಮ ಆಲೋಚನೆಗಳನ್ನು ಉತ್ಪನ್ನ ಮತ್ತು ಸೇವೆಗಳಾಗಿ ರೂಪಿಸಲು ಇದು ನೆರವಾಗಲಿದೆ.

ಕೃಷಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಅರೆವಾಹಕ ತಂತ್ರಜ್ಞಾನ ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜನ ನೀಡಲಾಗುವುದು. ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ನವೋದ್ಯಮಗಳ ನಡುವೆ ಸಹಭಾಗಿತ್ವ ಬೆಳೆಸುವುದಕ್ಕೂ ಆದ್ಯತೆ ನೀಡಲಾಗುತ್ತದೆ.

‘ಬಿಯಾಂಡ್ ಬೆಂಗಳೂರು’ ಆಶಯದಡಿ ರಾಜ್ಯದ ವಿವಿಧ ಭಾಗಗಳಲ್ಲಿ ತಂತ್ರಜ್ಞಾನ ಆಧಾರಿತ ಉದ್ಯಮಗಳ ಬೆಳವಣಿಗೆಗೆ ಉತ್ತೇಜನ ನೀಡುವುದು ನಮ್ಮ ಗುರಿ. ಯುವಜನರು ಉದ್ಯೋಗಕ್ಕಾಗಿ ಮಹಾನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆ ಕಡಿಮೆ ಮಾಡಿ, ತಮ್ಮ ಜಿಲ್ಲೆಗಳಲ್ಲಿಯೇ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಿ ಬೆಳೆಯಲು ಪೂರಕ ವಾತಾವರಣ ನಿರ್ಮಿಸಲಾಗುವುದು.

ಕಲಬುರಗಿಯಲ್ಲಿ ಲೀಪ್ ಗ್ರೋತ್ ಲ್ಯಾಬ್ ಸ್ಥಾಪನೆಯಿಂದ ಕಲ್ಯಾಣ ಕರ್ನಾಟಕದ ಯುವಜನರಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಈ ಭಾಗವನ್ನು ತಂತ್ರಜ್ಞಾನ, ಸಂಶೋಧನೆ ಮತ್ತು ನವೋದ್ಯಮ ಚಟುವಟಿಕೆಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular